ವೀರಾಜಪೇಟೆ, ನ. 10 : ಮನೆಗೆ ತೆರಳುವ ಮಾರ್ಗದ ಮಧ್ಯೆ ವಾಹನ ಅಡ್ಡಹಾಕಿದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಶಿವಕೇರಿಯ ನಿವಾಸಿ ಹೆಚ್.ಎ. ರಾಮು (55) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಶಿವಕೇರಿ ಬಳಿಯ ಕೊಡವ ಸಮಾಜದ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದವರು ಕಲ್ಯಾಣ ಮಂಟದ ಸನಿಹದಲ್ಲಿ ಮೈಕೊ ಕಾಲೋನಿಗೆ ತೆರಳುವ ಮುಖ್ಯ ಮಾರ್ಗಕ್ಕೆ ಅಡ್ಡಲಾಗಿ (ಕೆಎ-12ಎನ್-2601) ಸ್ಯಾಂಟ್ರೋ ಕಾರು ನಿಲುಗಡೆ ಮಾಡಿ ಮಂಟಪಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಅಪರಿಚಿತರು ವಾಹನದ ಚಕ್ರದ ಗಾಳಿ ತೆಗೆದಿದ್ದಾರೆ. ಈ ಸಂದರ್ಭ ಕಾಲೋನಿಯ ನಿವಾಸಿಯೊಬ್ಬರು ಆಸ್ಪತ್ರೆಗೆ ತುರ್ತಾಗಿ ತೆರಳಲು ಸಾಧ್ಯವಾಗದೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಬದಿಗೆ ಸರಿಸುವಂತೆ ಮೈಕ್ನಲ್ಲಿ ಸಾರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಪರಿಚಿತರು ಏಕಾಏಕಿಯಾಗಿ ಪೊಲೀಸರಿಗೆ ಕರೆ ಮಾಡಿದ ರಾಮು ಅವರ ಪುತ್ರ ರಾಘವೇಂದ್ರ ಎಂಬವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಡೆಯಲು ಯತ್ನಿಸಿದ ರಾಮು ಅವರಿಗೆ ಅವಾಚ್ಯ ಶಬ್ಧ ಪ್ರಯೋಗದಿಂದ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಗಾಯಾಳು ರಾಮು ನೀಡಿದ ದೂರಿನ ಮೇರೆಗೆ ಹಲ್ಲೆ ನಡೆಸಿದವರ ಮೇಲೆ 143, 323, 504, 506 ರೆ/ಡಬ್ಲ್ಯು 149 ಐ.ಪಿ.ಸಿ. ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.