ಪೆರಾಜೆ, ನ. 10: ಇತ್ತೀಚೆಗೆ ಕೆಲ ಪತ್ರಿಕೆಗಳಲ್ಲಿ ‘ಪೆರಾಜೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ’ ಎಂದು ಪ್ರಕಟವಾದ ಸುದ್ದಿಗೆ ಸಂಬಂಧಿಸಿದಂತೆ ಅದೇ ವಾರ್ಡಿನ ಮತದಾರರು ಸ್ಪಷ್ಟನೆ ನೀಡಿದ್ದಾರೆ.

ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ 4ನೇ ವಾರ್ಡಿನ ನಿವಾಸಿಗಳಾಗಿದ್ದು, ಇಲ್ಲಿನ ಕುಂಡಾಡು, ಚಾಮಕಜೆ ಮತ್ತು ಕರಿಭೂತನಕೋಡಿ ಕಾಲೋನಿಯಲ್ಲಿ ಬಹುತೇಕ ಪ.ಪಂಗಡಕ್ಕೆ ಸೇರಿದ ನಾವುಗಳು ಪೂರ್ವಜರ ಕಾಲದಿಂದಲೂ ವಾಸವಾಗಿದ್ದೇವೆ. ಬೆಟ್ಟ ಗುಡ್ಡ ಹಾಗೂ ಕಡಿದಾದ ಪ್ರದೇಶದಲ್ಲಿ ನಾವು ಜೀವನ ಸಾಗಿಸುತ್ತಿದ್ದು, ಕಳೆದ 25 ವರ್ಷಗಳಿಂದ ನಮ್ಮ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಗ್ರಾಮ ಪಂಚಾಯಿತಿ ಪೆರಾಜೆ ಹಂತ ಹಂತವಾಗಿ ಈಡೇರಿಸುತ್ತಾ ಬಂದಿದ್ದು, ಶಾಸಕ ಕೆ.ಜಿ. ಬೋಪಯ್ಯನವರು ಬಹಳಷ್ಟು ಅನುದಾನವನ್ನು ಒದಗಿಸಿಕೊಟ್ಟಿರುತ್ತಾರೆ. ಆರ್‍ಇಸಿ ಸೌಲಭ್ಯ ಯೋಜನೆಯಡಿ ಪ್ರತಿಯೊಂದು ಮನೆಗೆ ವಿದ್ಯುತ್ ಸಂಪರ್ಕ ಒದಗಿಸಿಕೊಟ್ಟಿದ್ದಾರೆ. ಅಲ್ಲದೆ ಕಾನೂನು ರೀತಿಯಲ್ಲಿ ಸೂಕ್ತ ದಾಖಲಾತಿ ಇರುವ ಎಲ್ಲರಿಗೂ ಕೂಡ ಸರ್ಕಾರದಿಂದ ವಸತಿ ಯೋಜನೆಯ ಮನೆಗಳನ್ನು ಒದಗಿಸಿಕೊಟ್ಟಿರುತ್ತಾರೆ.

ನೀರಿನ 2 ದೊಡ್ಡ ಪ್ರಮಾಣದ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿನ ಸರಬರಾಜನ್ನು ಮಾಡುತಿದ್ದಾರೆ. ಸರ್ವ ಋತು ರಸ್ತೆಯನ್ನಾಗಿ ಪರಿವರ್ತಿಸುತ್ತಿದ್ದಾರೆ. ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಹಾಗೂ 4ನೇ ವಾರ್ಡಿನ ಸದಸ್ಯ ನಂಜಪ್ಪ ನಿಡ್ಯಮಲೆ ಇವರುಗಳು ಬಹಳಷ್ಟು ವರ್ಷಗಳಿಂದ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಾವು ಮುಂದೆ ಬರುವ ಯಾವುದೇ ಚುನಾವಣೆಯನ್ನು ಬಹಿಷ್ಕಾರ ಮಾಡುವುದಿಲ್ಲ. ಚುನಾವಣೆ ಬಹಿಷ್ಕಾರ ಎಂಬದು ಅಭಿವೃದ್ಧಿ ಸಹಿಸದ, ರಾಜಕೀಯ ದುರುದ್ದೇಶದಿಂದ ಕೂಡಿದ ಬಹಿಷ್ಕಾರವೇ ಹೊರತು ಇಲ್ಲಿನ ನಿವಾಸಿಗಳಾದ ನಮ್ಮ ನಿರ್ಧಾರವಲ್ಲ.

ಕುಂಡಾಡು ಶಾಲೆಗೆ ಖಾಯಂ ಶಿಕ್ಷಕರಿಲ್ಲದಿರುವ ವಿಚಾರದ ಬಗ್ಗೆ ಈಗಾಗಲೇ ಶಾಲಾ ಎಸ್.ಡಿ.ಎಂ.ಸಿ. ಹಾಗೂ ಗ್ರಾಮಸ್ಥರ ಸಭೆ ಕರೆದು ಸಂಬಂಧಿಸಿದ ಇಲಾಖೆಗೆ ಮಾಹಿತಿ ಒದಗಿಸಲಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಸರ್ಕಾರದಿಂದ ಒಬ್ಬ ಖಾಯಂ ಶಿಕ್ಷಕರನ್ನು ನಮ್ಮ ಕುಂಡಾಡು ಶಾಲೆಗೆ ನೀಡುವಂತೆ ಮಾನ್ಯ ಶಾಸಕರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.