ವೀರಾಜಪೇಟೆ, ನ. 10: ವೀರಾಜಪೇಟೆ ಪಟ್ಟಣದ ಗಾಂಧಿನಗರದ ಬಳಿಯ ಲೇಔಟ್‍ನಲ್ಲಿ ಒಂಭತ್ತು ಮಂದಿ ಎರಡು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದು, ಈ ಪೈಕಿ ಕೇವಲ ಎರಡು ನಿವಾಸಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇತರರಿಗೆ ತಾತ್ಕಾಲಿಕ ಸಂಪರ್ಕ ನೀಡಿರುವುದರಿಂದ ದುಬಾರಿ ಶುಲ್ಕ ಪಾವತಿಸುವಂತಾಗಿದೆ. ವಿದ್ಯುತ್ ಸಂಪರ್ಕದಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಸಾರ್ವಜನಿಕ ಸಂಪರ್ಕದ ಸಭೆಯಲ್ಲಿ ಅಧಿಕಾರಿಗಳ ಮುಂದೆ ಬಿ.ಎಸ್. ಮೋಹನ್ ಸ್ವಾಮಿ ದೂರಿದರು. ಇದೇ ಲೇಔಟ್‍ನಲ್ಲಿರುವ ಜೋಸೆಫ್ ಮೆನೇಜಸ್ ಇದೇ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಅಹವಾಲು ಸಲ್ಲಿಸಿದರು.ವೀರಾಜಪೇಟೆಯ ಸೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಸೆಸ್ಕಾಂನ ಮಡಿಕೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಎನ್. ದೇವಯ್ಯ, ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು, ಗ್ರಾಹಕರು ಭಾಗವಹಿಸಿ ದೂರು ಸಲ್ಲಿಸಿದರು.

ಪಾಲಿಬೆಟ್ಟದ ಮುನೀರ್ ಎಂಬವರು ಮಾತನಾಡಿ ಕಾಫಿ ತೋಟದಲ್ಲಿ ಕಾಡಾನೆಗಳ ಹಾವಳಿ ಜೊತೆಗೆ ವಿದ್ಯುತ್ ಸಂಪರ್ಕದ ಸಮಸ್ಯೆ ಉಂಟಾಗಿದೆ. ಹನ್ನೊಂದು ಕಿ.ವಿ. ವಿದ್ಯುತ್ ಸಂಪರ್ಕ ತೋಟದ ಮಧ್ಯೆ ಹಾದುಹೋಗಿದ್ದು ತಂತಿ ಹಳೆಯದಾಗಿದ್ದು ನೆಲದ ಸ್ವಲ್ಪ ಅಂತರದಲ್ಲಿ ಜೋತು ಬೀಳುತ್ತಿರುವು ದರಿಂದ ಅಪಾಯ ಕಾದಿದೆ. ದುರಂತ ಸಂಭವಿಸುವ ಮೊದಲೇ ಇದನ್ನು ದುರಸ್ತಿಪಡಿಸಬೇಕು ಎಂದು ಗಮನಕ್ಕೆ ತಂದರು.

ಬೇಟೋಳಿ ಗ್ರಾಮದ ನಂಜಪ್ಪ ಮಾತನಾಡಿ; ಹನ್ನೊಂದು ಕೆ.ವಿ. ತಂತಿ ಸಂಪರ್ಕ ತೋಟದ ರಸ್ತೆಯ ಬದಿಯಲ್ಲಿದೆ. ಇದು ತೋಟಕ್ಕೆ ತಾಗುವ ಹಂತದಲ್ಲಿದೆ. ತೋಟದೊಳಗಿರುವ ಇನ್ನು ಕೆಲವು ವಿದ್ಯುತ್ ಕಂಬಗಳು ನೆಲಕ್ಕೆ ಉರುಳುವ ಸ್ಥಿತಿಯಲ್ಲಿದೆ. ಇದನ್ನು ತಕ್ಷಣ ಸರಿಪಡಿಸುವಂತೆ ಲಿಖಿತ ದೂರು ಸಲ್ಲಿಸಿದರು.

(ಮೊದಲ ಪುಟದಿಂದ) ಕುಕ್ಲೂರು ಗ್ರಾಮದ ನಿವಾಸಿಯೊಬ್ಬರು ನಮ್ಮ ಮನೆಯ ವಿದ್ಯುತ್ ಸಂಪರ್ಕಕ್ಕಾಗಿ ಬೇರೆಯೊಬ್ಬರ ಜಾಗದಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಇದರಿಂದ ಗ್ರಾಹಕರಾದ ನಾವು ಕಿರುಕುಳ ಅನುಭವಿಸುವಂತಾಗಿದೆ. ಇದನ್ನು ಸರಿಪಡಿಸುವಂತೆ ತಿಳಿಸಿದರು.

ಕಾಕೋಟುಪರಂಬಿನ ನಾಲ್ಕೇರಿ ಗ್ರಾಮದ ನಿವಾಸಿ ಮಹಿಳೆಯೊಬ್ಬರು ತನ್ನ ವಾಸದ ಮನೆ ಮೇಲೆ 11 ಕಿ.ವಿ. ತಂತಿ ಸಂಪರ್ಕ ಹಾದು ಹೋಗಿರುವುದನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಸರಿಪಡಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಸಾರ್ವಜನಿಕರು, ಗ್ರಾಹಕರುಗಳಿಂದ ದೂರು ಅರ್ಜಿ ಅಹವಾಲುಗಳನ್ನು ಸ್ವೀಕರಿಸಲಾಯಿತು.

ದೂರುಗಳಿಗೆ ನೇರವಾಗಿ ಸ್ಪಂದಿಸಿ

ದೂರು ಅರ್ಜಿಗಳ ಸ್ವೀಕಾರದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ದೇವಯ್ಯ ಅವರು ಸಾರ್ವಜನಿಕರು, ಗ್ರಾಹಕರುಗಳು ಸೆಸ್ಕಾಂ ವಿದ್ಯುತ್ ಸಂಪರ್ಕದ ಕುರಿತು ಸಲ್ಲಿಸುವ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿ ಪರಿಹಾರ ಒದಗಿಸಬೇಕು. ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿ ಪರಿಹಾರ ಒದಗಿಸುವ ಕ್ರಮ ಕೈಗೊಳ್ಳಬೇಕು. ಸಹಾಯಕ ಅಧಿಕಾರಿಗಳು ಸೆಸ್ಕಾಂನ ಸಂಪರ್ಕದ ಸೇವೆಯಲ್ಲಿ ಉದಾಸೀನ ಮಾಡಬಾರದು. ಸಮಸ್ಯೆಗಳು, ಬೇಡಿಕೆಗಳಿಗೆ ಆದ್ಯತೆ ನೀಡುವಂತೆ ಹೇಳಿದರು.

ಸೆಸ್ಕಾಂನ ಉಪ ವಿಭಾಗದ ಸಹಾಯಕ ಅಭಿಯಂತರ ರಮೇಶ್, ಸಹಾಯಕರಾದ ದಿಲೀಪ್ ಸಿಬ್ಬಂದಿಗಳು ಹಾಜರಿದ್ದರು.

ಕಂಬ ಬದಲಿಸಲು ಆಗ್ರಹ

ಗೋಣಿಕೊಪ್ಪಲು: ಭತ್ತದ ಗದ್ದೆಯ ಮೂಲಕ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಮುಖ್ಯ ರಸ್ತೆಯ ಮೂಲಕ ಸಂಪರ್ಕ ಕಲ್ಪಿಸುವುದು ಸೇರಿದಂತೆ ವಿವಿಧ ಭಾಗದ ವಿದ್ಯುತ್ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಹುದಿಕೇರಿ ಶ್ರೀಮಂಗಲ ಬಾಳೆಲೆ, ಪೊನ್ನಂಪೇಟೆ, ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ ನಾಗರಿಕರು ಹಿರಿಯ ಅಧಿಕಾರಿಗಳೊಂದಿಗೆ ತಮ್ಮ ಭಾಗದಲ್ಲಿ ಆಗುತ್ತಿರುವ ವಿದ್ಯುತ್ ಸಮಸ್ಯೆಯ ಬಗ್ಗೆ ಗಮನ ಸೆಳೆದರು.

ಮಡಿಕೇರಿಯ ಸಹಾಯಕ ಇಂಜಿನಿಯರ್ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರ, ನಾಗರಿಕರ ಬಹು ಬೇಡಿಕೆಯ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಜಾನೆಯಿಂದಲೇ ನಾಗರಿಕರು ಕಚೇರಿಗೆ ಆಗಮಿಸಿ ತಮ್ಮ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಶ್ರೀಮಂಗಲ, ಬಾಳೆಲೆ, ಗೋಣಿಕೊಪ್ಪ, ಪೊನ್ನಂಪೇಟೆ ಭಾಗದ ಕಿರಿಯ ಇಂಜಿನಿಯರ್‍ಗಳು ವಿದ್ಯುತ್ ಗ್ರಾಹಕರು ಕೇಳಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಭರವಸೆ ನೀಡಿದರು. ಇಂಜಿನಿಯರ್‍ಗಳಾದ ಕೃಷ್ಣಕುಮಾರ್, ಮನುಕುಮಾರ್, ವಿಜಯ್ ಕುಮಾರ್, ಸುನೀಲ್ ಸೇರಿದಂತೆ ಕಿರಿಯ ಸಹಾಯಕಿ ತಸ್ವಿ, ಚೆಸ್ಕಾಂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಹೈಸೊಡ್ಲೂರು ಭಾಗದ ಗ್ರಾಮಸ್ಥರು ಆಗಮಿಸಿ ಈ ಭಾಗದಲ್ಲಿ ನಿರಂತರ ಸಮಸ್ಯೆ ಎದುರಾಗುತ್ತಿದ್ದು ಈ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸುವ ಸಲುವಾಗಿ ಭತ್ತದ ಗದ್ದೆಯ ಮೂಲಕ ಅಳವಡಿಸಿರುವ ವಿದ್ಯುತ್ ತಂತಿಯನ್ನು ಬದಲಿಸಿ ಇವುಗಳನ್ನು ರಸ್ತೆ ಬದಿಯಲ್ಲಿ ಹಾದು ಹೋಗುವಂತೆ ವ್ಯವಸ್ಥೆ ಕಲ್ಪಿಸಿದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಲಭಿಸಲಿದೆ ಎಂದು ಮನವಿ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

-ಡಿ.ಎಂ. ರಾಜ್‍ಕುಮಾರ್, ಹೆಚ್.ಕೆ. ಜಗದೀಶ್