ಮಡಿಕೇರಿ, ನ. 8: ಕೊಡಗು ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಯೊಂದಿಗೆ; ರೈತರಿಗೆ ಸ್ವಾವಲಂಭನೆಯ ಬದುಕು ಕಲ್ಪಿಸುವ ದಿಸೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಂತ್ರಾಲಯದಿಂದ ವರ್ಷದಿಂದ ವರ್ಷಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಈ ಅನುದಾನದಲ್ಲಿ ಸದ್ಭಳಕೆ ಗಿಂತಲೂ ಬಹಳಷ್ಟು ಹಣ ದುರುಪ ಯೋಗದೊಂದಿಗೆ; ಅಧಿಕಾರಿಗಳ ಮೂಗಿನ ನೇರಕ್ಕೆ ಒಂದಿಷ್ಟು ಕೆಲಸ ತೋರಿಸಿ ಅವ್ಯವಹಾರದಲ್ಲಿ ತೊಡಗಿ ರುವ ಗಂಭೀರ ಆರೋಪವಿದೆ.ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮಾದಾಪುರದಲ್ಲಿ ಜಂಬೂರುವಿನ ತೋಟಗಾರಿಕಾ ಕ್ಷೇತ್ರ ಸಾಕ್ಷಿಯಾಗಿದೆ. ಈ ಕ್ಷೇತ್ರ 200 ಎಕರೆ ಪ್ರದೇಶದಿಂದ ಕೂಡಿದೆ. ಇಲ್ಲಿ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ 50 ಎಕರೆ ಜಾಗವನ್ನು ಸರಕಾರ ಸ್ವಾಧೀನಪಡಿಸಿಕೊಂಡು 2018ರ ನಿರಾಶ್ರಿತರಿಗಾಗಿ ಮನೆಗಳನ್ನು ಕಲ್ಪಿಸಿದೆ. ಹಿಂದೆ ಈ ಸಸ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಇಡೀ ಕರ್ನಾಟಕಕ್ಕೆ ಒಂದಾಗಿದ್ದ ತೋಟಗಾರಿಕಾ ಶೈಕ್ಷಣಿಕ ತರಬೇತಿ ಕೇಂದ್ರವಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಕೇಂದ್ರ ಇತ್ತೀಚಿನ ವರ್ಷಗಳಲ್ಲಿ ಬೇರೆ ಜಿಲ್ಲೆಗೆ ಸ್ಥಳಾಂತರಗೊಂಡಿದೆ. ಇನ್ನೊಂದೆಡೆ ಇಡೀ ಸಸ್ಯ ಕ್ಷೇತ್ರ್ರ ವರ್ಷ ಉರುಳಿದಂತೆ ಕಿರಿದಾಗತೊಡಗಿದೆ.ವ್ಯರ್ಥ ಕಾಮಗಾರಿ : ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬರುತ್ತಿರುವ ಅನುದಾನ ದುರ್ಬಳಕೆ ಯೊಂದಿಗೆ ನಿರರ್ಥಕ ಅಥವಾ ವ್ಯರ್ಥ ಕಾಮಗಾರಿಗೆ ಪ್ರಸ್ತುತ ಇಲಾಖೆಯ ಯೋಜನೆಯು ನಿದರ್ಶನವಾಗಿದೆ. ಮಾದಾಪುರ ವ್ಯಾಪ್ತಿಯ ಈ ಸಸ್ಯಕ್ಷೇತ್ರಕ್ಕೆ ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ಸರಹದ್ದಿನಲ್ಲಿ ಸಿಮೆಂಟ್ ಕಂಬಗಳ ಸಹಿತ ತಂತಿಬೇಲಿ ನಿರ್ಮಿಸಲಾಗಿತ್ತು. ಅಲ್ಲದೆ ಮಾವಿನ ತೋಪು ಅಭಿವೃದ್ಧಿ ಹೆಸರಿನಲ್ಲಿ ಹಣವನ್ನು ಪೋಲುಮಾಡಲಾಗಿತ್ತು. ಇನ್ನೊಂದೆಡೆ ಬಯಲಿನ ನಡುವೆ ಬೃಹತ್ ಪ್ರಮಾಣದಲ್ಲಿ ಕೆರೆ ನಿರ್ಮಿಸುವ ಯೋಜನೆ ಕೈಗೊಳ್ಳಲಾಗಿತ್ತು. ಕೇವಲ ಒಂದೆರಡು ವರ್ಷಗಳಲ್ಲಿ ಆಗಿರುವ ಈ ಕೆಲಸಗಳು ಹಣ ದುರುಪಯೋಗಕ್ಕೆ ಸಾಕ್ಷಿಯೆಂದು ಜಂಬೂರು ಹಾಗೂ ಅಕ್ಕಪಕ್ಕ ನಿವಾಸಿಗಳ ಆರೋಪವಾಗಿದೆ.
(ಮೊದಲ ಪುಟದಿಂದ)
ಮತ್ತೆ ಅದೇ ಚಾಳಿ : ಈಗ ಮತ್ತೆ ಅದೇ ಚಾಳಿ ಮುಂದುವರಿದಿದ್ದು, ಈ ಹಿಂದೆ ನಿರ್ಮಿಸಿರುವ ಲಕ್ಷಗಟ್ಟಲೆ ಹಣದ ತಂತಿ ಬೇಲಿಯನ್ನು ಕಿತ್ತೊಗೆಯಲಾಗುತ್ತಿದೆ; ಇರುವ ಸುಸಜ್ಜಿತ ಬೇಲಿ ಕಿತ್ತು ಹಾಕಿ ಅಲ್ಲಿಯೇ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವ್ಯವಹಾರ ಶಂಕೆ : ತೋಟಗಾರಿಕಾ ಇಲಾಖೆಯಿಂದ ಅವ್ಯವಹಾರದೊಂದಿಗೆ ಹಣ ದುರುಪಯೋಗಕ್ಕೆ ನಿದರ್ಶನವೆಂಬಂತೆ; ಈ ಸಸ್ಯಕ್ಷೇತ್ರದ ಬಹಳಷ್ಟು ಕಡೆ ಸಮರ್ಪಕವಾಗಿ ಬೇಲಿಯೇ ಇರುವದಿಲ್ಲ. ಪರಿಣಾಮವಾಗಿ ಹಲವಷ್ಟು ಪ್ರಭಾವಿಗಳು ಜಂಬೂರು ತೋಟಗಾರಿಕಾ ಕ್ಷೇತ್ರದ ಜಾಗವನ್ನು ಅಲ್ಲಲ್ಲಿ ಎಕರೆಗಟ್ಟಲೆ ಅತಿಕ್ರಮಿಸಿಕೊಂಡಿರುವದು ಗೋಚರಿಸಲಿದೆ. ಇಂತಹ ಕಡೆಗಳಲ್ಲಿ ಅಗತ್ಯ ಬೇಲಿ ನಿರ್ಮಿಸಿ ಅತಿಕ್ರಮಣ ತೆರವುಗೊಳಿಸಬೇಕಾದ ಇಲಾಖೆಯ ಮಂದಿ; ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬದು ಗ್ರಾಮಸ್ಥರ ಆರೋಪವಾಗಿದೆ.
ಗುಜರಿ ಪಾಲು : ಇಷ್ಟೊಂದು ವಿಶಾಲ ತೋಟಗಾರಿಕಾ ಕ್ಷೇತ್ರದ ನಿರ್ವಹಣೆಗೆ ಖಾಯಂ ಅಧಿಕಾರಿ ಹಾಗೂ ಸಿಬ್ಬಂದಿಗಳಿಲ್ಲದೆ; ಹಳೆಯ ಕಟ್ಟಡದಲ್ಲಿರುವ ವಸ್ತುಗಳನ್ನು ಇಂದು ಹಾಡಹಗಲಿನಲ್ಲಿ ಯಾರೋ ಗುಜರಿಯವರು ಲಾರಿಗಟ್ಟಲೆ ತುಂಬಿಸಿಕೊಂಡು ಸಾಗಿಸುತ್ತಿದ್ದ ದೃಶ್ಯ ಎದುರಾಯಿತು ಎಂದು ಪ್ರತ್ಯಕ್ಷದರ್ಶಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ. ಅಲ್ಲದೆ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸಾಕ್ಷಿಯೆಂಬಂತೆ ತೋಟಗಾರಿಕಾ ಕ್ಷೇತ್ರದ ವಾರ್ಷಿಕ ಉತ್ಪನ್ನಗಳಾದ ಮಾವು, ಸಪೋಟ, ಸೀಬೆ, ತೆಂಗು, ನಿಂಬೆ ಇನ್ನಿತರ ಫಸಲುಗಳನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಮಾರುಕಟ್ಟೆ ಕಲ್ಪಿಸುವ ಬದಲಿಗೆ, ಒಳಗಿಂದೊಳಗೆ ವ್ಯಾಪಾರ ನಡೆಸುವ ಅನುಮಾನವಿದೆ ಎಂದು ಟೀಕಿಸಿದ್ದಾರೆ.
ಈ ಎಲ್ಲಾ ಅಂಶಗಳ ಕುರಿತು ಸರಕಾರದಿಂದ ಸೂಕ್ತ ತನಿಖೆ ನಡೆಸು ವಂತೆಯೂ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಅಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳು ಇತ್ತ ಕಾಳಜಿ ತೋರಬೇಕೆಂದು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಗಮನ ಸೆಳೆದಿದ್ದಾರೆ.