ಸಿದ್ದಾಪುರ, ನ. 6: ಹೊರ ಜಿಲ್ಲೆಯೊಂದರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಿಸಿ ನೆಲ್ಲಿಹುದಿಕೇರಿ ಗ್ರಾಮದ ಕಬ್ಬಿಣ ಕೆಲಸ ಮಾಡುವ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕಳೆದ ಒಂದು ವರ್ಷಗಳ ಹಿಂದೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣದ ಪೊಲೀಸರು ಬುಧವಾರ ಸಂಜೆ ಪ್ರಕರಣದ ಆರೋಪಿಗಳನ್ನು ವಾಹನಗಳಲ್ಲಿ ನೆಲ್ಯಹುದಿಕೇರಿ ಪಟ್ಟಣಕ್ಕೆ ಕರೆತಂದು ಮಾಹಿತಿ ಕಲೆ ಹಾಕಿದರು. ಅಲ್ಲದೇ ಬೆಟ್ಟದಕಾಡು ರಸ್ತೆಯಲ್ಲಿರುವ ಕಬ್ಬಿಣದ ಕೆಲಸ ಮಾಡುತ್ತಿರುವ ವ್ಯಕ್ತಿಯೊಂದಿಗೆ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಇದೇ ಅಂಗಡಿಯಿಂದ ಕತ್ತಿಯೊಂದನ್ನು ಪಡೆದುಕೊಂಡಿರುವುದಾಗಿ ತನಿಖೆ ಸಂದರ್ಭ ಬಾಯಿಬಿಟ್ಟಿರುತ್ತಾನೆ ಎನ್ನಲಾಗಿದೆ. ಈ ಹಿನ್ನೆಲೆ ನೆಲ್ಯಹುದಿಕೇರಿಯ ಬೆಟ್ಟದಕಾಡು ರಸ್ತೆಯಲ್ಲಿರುವ ಕಬ್ಬಿಣದ ಅಂಗಡಿಯ ಮಾಲೀಕನನ್ನು ಶ್ರೀರಂಗಪಟ್ಟಣದ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ.