ಗೋಣಿಕೊಪ್ಪಲು, ನ. 6: ಕೊಡಗು ಜಿಲ್ಲೆಯಲ್ಲಿ ಪ್ರಬಲ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಳಿ ಬರುತ್ತಿರುವ ಕೂಗಿನ ಹಿನ್ನೆಲೆ ಇದನ್ನು ವಿರೋಧಿಸಿ ಕೊಡಗು ಜಿಲ್ಲೆಯ ಆದಿವಾಸಿ ಮುಖಂಡರುಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.
ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಬುಕಾಡು ಅರಣ್ಯ ವ್ಯಾಪ್ತಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಸಿ. ರಾಮು ಅಧ್ಯಕ್ಷತೆಯಲ್ಲಿ ಜಿಲ್ಲೆಯ ಆಯ್ದ ಆದಿವಾಸಿಗಳ ಮುಖಂಡರುಗಳು ತುರ್ತು ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಪ್ರತಿ ಹಾಡಿಗಳಲ್ಲಿ ಆದಿವಾಸಿಗಳಲ್ಲಿ ಜಾಗೃತಿ, ಮುಖ್ಯಮಂತ್ರಿಗಳ ಬಳಿ ನಿಯೋಗ, ಮುಖ್ಯ ಕಾರ್ಯದರ್ಶಿಗಳ ಬಳಿ ನಿಯೋಗ ತೆರಳಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ ಸಮುದಾಯವೊಂದು ಗಿರಿಜನರಿ ಗಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರದಲ್ಲಿದೆ. ಒಂದು ವೇಳೆ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ಲಭಿಸಿದ್ದಲ್ಲಿ ನೈಜ ಗಿರಿಜನರಿಗೆ ಸಿಗುತ್ತಿರುವ ಅಲ್ಪಸ್ವಲ್ಪ ರಾಜಕೀಯ ಸ್ಥಾನಮಾನಗಳು ಸೇರಿದಂತೆ ಯಾವುದೇ ಸರ್ಕಾರದ ಯೋಜನೆಯೂ ನೇಪಥ್ಯಕ್ಕೆ ಸರಿಯಲಿದೆ. ಮುಂದೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಸೇರಿದಂತೆ ಇನ್ನಿತರ ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ತಿಳಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಸ್ತಾಪಿಸಿದರು. ಇವರ ಅಭಿಪ್ರಾಯವನ್ನು ಅಂಗೀಕರಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ತೀರ್ಮಾನ ಕೈಗೊಳ್ಳಲಾಯಿತು.
ಬೊಮ್ಮಾಡು ಗ್ರಾಮ ಪಂಚಾಯಿತಿಯ ಸದಸ್ಯ ಜೆ.ಎಂ. ಸೋಮಯ್ಯ ಮಾತನಾಡಿ, ಜಿಲ್ಲೆಯ ಪ್ರತಿ ಹಾಡಿಗಳಲ್ಲಿ ಆದಿವಾಸಿಗಳ ಮುಖಂಡರು ತೆರಳಿ ಸಭೆ ನಡೆಸುವ ಮೂಲಕ ಪ್ರಬಲ ಜನಾಂಗವು ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿರುವ ಸ್ಥಾನಮಾನಗಳನ್ನು ಕೇಳುತ್ತಿರುವ ಬಗ್ಗೆ ವಿರೋಧಿಸಿ ಹೋರಾಟ ರೂಪಿಸಲು, ಆದಿವಾಸಿಗಳಲ್ಲಿ ಜಾಗೃತಿ ಮೂಡಿಸಲು ಸಭೆಗಳನ್ನು ನಡೆಸುವಂತೆ ಪ್ರಸ್ತಾಪಿಸಿದರು. ಮುಂದಿನ ಸೋಮವಾರದಿಂದಲೇ ಪ್ರತಿವಾರ ಜಿಲ್ಲೆಯಲ್ಲಿ ವಾಸವಾಗಿರುವ ಆದಿವಾಸಿಗಳ ಹಾಡಿಗಳಲ್ಲಿ ಸಭೆ ನಡೆಸಿ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡುವ ಬಗ್ಗೆ ತೀರ್ಮಾನಕ್ಕೆ ಬರಲಾಯಿತು. ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ, ಗಿರಿಜನ ಮುಖಂಡ ಪಿ.ಎಂ. ಸುಬ್ರು ಮಾತನಾಡಿ, ಆದಿವಾಸಿಗಳಿಗೆ ಇದೀಗ ತಮ್ಮ ನೋವಿನ ಅರಿವಾಗುತ್ತಿದೆ. ಇದರಿಂದ ಪ್ರಶ್ನೆ ಮಾಡಲು ಮುಂದಾಗಿದ್ದೇವೆ. ಅಲ್ಪಸ್ವಲ್ಪ ವಿದ್ಯಾಭ್ಯಾಸವಿರುವ ಆದಿವಾಸಿಗಳು ಇದೀಗ ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇವೆ ಎಂದರು.
ಬುಡಕಟ್ಟು ಕೃಷಿಕರ ಸಂಘದ ಉಪಾಧ್ಯಕ್ಷ ಪಿ.ಕೆ. ಮಣಿಕುಂಞ ನಾಯಕನೆಂದು ಗುರುತಿಸಿಕೊಂಡಿರುವ ಜಮ್ಮಡ ಸೋಮಣ್ಣ ಪ್ರಬಲ ಜನಾಂಗದ ಮೀಸಲಾತಿ ವಿಚಾರದಲ್ಲಿ ಬೆಂಬಲ ಸೂಚಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಇಲ್ಲಿಯ ಯಾವುದೇ ಪಕ್ಷವು ಇವರಿಗೆ ಬೆಂಬಲ ನೀಡಿರಲಿಲ್ಲ. ಅವರು ಕಾಂಗ್ರೆಸ್ ಯುವ ಘಟಕದಿಂದ ಬೆಂಬಲವಿದೆ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷವು ಇಂತಹವರನ್ನು ಉಚ್ಚಾಟಿಸಬೇಕು. ಇಲ್ಲದಿದ್ದಲ್ಲಿ ಆದಿವಾಸಿ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ವಿರೋಧಿ ಸಬೇಕಾಗುತ್ತದೆ ಎಂದರು.
ಇತರರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಮೊದಲ ಕಾರ್ಯಕ್ರಮವು ಚನ್ನಂಗಿ ಗ್ರಾಮದಿಂದ ಆರಂಭಗೊಳ್ಳಲಿದೆ ಎಂದು ಮುಖಂಡರಾದ ಪಿ.ಕೆ. ಸಿದ್ದಪ್ಪ ತಿಳಿಸಿದರು. ಸಭೆಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್, ಆದಿವಾಸಿ ಮುಖಂ ಡರುಗಳಾದ ಪಿ.ಸಿ. ಬೋಜಪ್ಪ, ರಾಜು, ಮಾರ, ರಮೇಶ್, ಅಪ್ಪಣ್ಣ, ಪಿ.ಬಿ., ರವೀಣ ಜೆ.ಕೆ. ರಾಜು, ಸುಬ್ಬ, ಮುಂತಾದವರು ಹಾಜರಿದ್ದರು.