ಮಡಿಕೇರಿ, ನ. 6: ಕರ್ನಾಟಕ ರಾಜ್ಯದ ಗಡಿಗಳಿಗೆ ಹೊಂದಿಕೊಂಡಿರುವ ಕೇರಳ ಹಾಗೂ ತಮಿಳುನಾಡಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೊಡಗು ಸೇರಿದಂತೆ ತೀವ್ರ ನಿಗಾವಹಿಸಲಾಗುವದು ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇಂದು ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಎರಡು ಗಂಟೆಗಳ ಚರ್ಚೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಆ ದಿಸೆಯಲ್ಲಿ ಈಗಿರುವ ನಕ್ಸಲ್ ನಿಗ್ರಹ ಕಾರ್ಯಪಡೆಯ ಎರಡು ತಂಡಗಳ ಜೊತೆಗೆ ಮತ್ತೊಂದು ತಂಡ ರಚಿಸುವ ಮೂಲಕ, ಈ ತಂಡಕ್ಕೆ ಅಗತ್ಯ ಸಿಬ್ಬಂದಿ ಸೇರಿದಂತೆ ಸರಕಾರದಿಂದ ಆರ್ಥಿಕ ನೆರವು ಇನ್ನಿತರ ಮೂಲ ಸೌಕರ್ಯ ಒದಗಿಸಲಾಗುವದು ಎಂದು ಗೃಹ ಸಚಿವರು ಮಾರ್ನುಡಿದರು. ಅಲ್ಲದೆ ಗಡಿಗಳಲ್ಲಿ ರಾಜ್ಯ ಹಾಗೂ ಕೊಡಗಿನ ಸುರಕ್ಷತೆ ಸಲುವಾಗಿ ನಿರಂತರ ‘ಕೂಂಬಿಂಗ್’ ಆರಂಭಿಸುವದ ರೊಂದಿಗೆ, ಕೊಡಗಿನ ಗಡಿ ವಯನಾಡಿನಲ್ಲಿ ನಕ್ಸಲ್ ಹತ್ಯೆ ಬಳಿಕ ತೀವ್ರ ಕಟ್ಟೆಚ್ಚರ ಕೈಗೊಂಡಿರುವದಾಗಿ ವಿವರಿಸಿದರು.ನಿರ್ಧಾಕ್ಷಿಣ್ಯ ಕ್ರಮ : ಕೊಡಗಿನಲ್ಲಿ ಅಕ್ರಮ ಹೋಂಸ್ಟೇಗಳೊಂದಿಗೆ ಕಾನೂನು ಬಾಹಿರ ಕೃತ್ಯಗಳು ಮತ್ತು ಮಾದಕ ವಸ್ತುಗಳ ದಂಧೆ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮವಹಿಸಲು, ಇಂದಿನ ಸಭೆಯಲ್ಲಿ ಸೂಚಿಸಿದ್ದು, ಇಂತಹ ಚಟುವಟಿಕೆ ಗಳಿಗೆ ಕುಮ್ಮಕ್ಕು ನೀಡುವದು ಗೊತ್ತಾದರೆ, ಅಂತಹ ಪೊಲೀಸರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವದು ಎಂದರು.

ವ್ಯಾಪಾರ ಕೇಂದ್ರಗಳಿಗೆ ದಾಳಿ : ಕೊಡಗು ಸೇರಿದಂತೆ ಕರ್ನಾಟಕದಲ್ಲಿ ಸಾಕಷ್ಟು ಔಷಧಿ ಮಳಿಗೆಗಳು ಮತ್ತು ಸಗಟು ವ್ಯಾಪಾರ ಕೇಂದ್ರಗಳಲ್ಲಿ ನಿಷೇಧಿತ ಔಷಧಿಗಳು ಹಾಗೂ ಕಾನೂನು ಬಾಹಿರ ಉತ್ಪನ್ನಗಳ ಮಾರಾಟದ ಆರೋಪವಿದೆ. ಇಂತಹ ವಸ್ತುಗಳನ್ನು ರಹಸ್ಯವಾಗಿ ನಿರ್ದಿಷ್ಟ ವ್ಯಕ್ತಿಗಳಿಗೆ ವಿತರಿಸುತ್ತಿರುವ ಸುಳಿವಿದ್ದು, ಆ ದಿಸೆಯಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮದೊಂದಿಗೆ, ದಾಳಿ ನಡೆಸಲು ಆದೇಶಿಸಿರುವದಾಗಿ ಸಚಿವರು ಎಚ್ಚರಿಸಿದರು.

‘ಲವ್ ಜಿಹಾದ್’ ಕಾನೂನು : ಯುವಕರನ್ನು ವ್ಯವಸ್ಥಿತವಾಗಿ ದಿಕ್ಕುತಪ್ಪಿಸಿ ಅಮಾಯಕರ ಶೋಷಣೆ ಮೂಲಕ ‘ಲವ್ ಜಿಹಾದ್’ ಎಸಗುತ್ತಿರುವ ಕೃತ್ಯಗಳು ಕಳೆದ 10 ವರ್ಷಗಳಿಂದ ಒಂದು ಸಾಮಾಜಿಕ ಪಿಡುಗಿನ ರೀತಿ ಮುಂದುವರೆದಿದೆ. ಈ ಬಗ್ಗೆ ಅಲಹಾಬಾದ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಆ ದಿಸೆಯಲ್ಲಿ ಕೆಲವು ರಾಜ್ಯಗಳಲ್ಲಿ ಕಠಿಣ ಕಾನೂನು ಜಾರಿಗೆ ಮುಂದಾಗಿದ್ದು, ಕರ್ನಾಟಕದಲ್ಲಿಯೂ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕಾನೂನು ಜಾರಿಗೊಳಿಸಲು ಸರಕಾರ ಸಂಪುಟ ಸಭೆಯಲ್ಲಿ ಪರಿಣಾಮಕಾರಿ ಕ್ರಮ ಅನುಸರಿಸಲಿದೆ ಎಂದು ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಅಪರಾಧ ಸಹಿಸುವದಿಲ್ಲ : ಜಾಗತಿಕ ಕೊರೊನಾ ನಡುವೆ ಸಾಕಷ್ಟು ಅಪರಾಧಗಳು ನಿಯಂತ್ರಣದಲ್ಲಿದ್ದು, ಇದೀಗ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿರುವ ಸುಳಿವಿದೆ; ಈ ಸಂಬಂಧ ಪೊಲೀಸ್ ಇಲಾಖೆಗೆ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದ ಸಚಿವರು, ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವಂತೆ ಸಭೆಯಲ್ಲಿ ಸೂಚಿಸಿದ್ದು, ಗೃಹ ಇಲಾಖೆ ಇಂತಹ ಕೃತ್ಯಗಳನ್ನು ಸಹಿಸುವದಿಲ್ಲವೆಂದು ಗಂಭೀರ ಸಂದೇಶ ರವಾನಿಸಿದರು.

ಬಾಲಿಶ ಹೇಳಿಕೆ : ಬೆಂಗಳೂರಿನ ಡಿ.ಜಿ. ಹಳ್ಳಿ ಕೆ.ಜಿ. ಹಳ್ಳಿ ಗಲಭೆ ಮತ್ತು ಮಾಜಿ ಸಚಿವ ಶ್ರೀಕಾಂತ್ ಕುಲಕರ್ಣಿ ಸಹೋದರರ ಬಂಧನ ಸಂಬಂಧ ಕಾಂಗ್ರೆಸ್ಸಿಗರು

(ಮೊದಲ ಪುಟದಿಂದ) ಬಾಲಿಶ ಹೇಳಿಕೆ ನೀಡುತ್ತಿದ್ದು, ಸಿಬಿಐ ತನ್ನದೇ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವರು ಸಮರ್ಥಿಸಿದರು.

ಕಾನೂನಿನಂತೆ ಕ್ರಮ : ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸಂಬಂಧ ಪ್ರಶ್ನಿಸಲಾಗಿ, ಕಂದಾಯ ಇಲಾಖೆಯ ಮಾರ್ಗ ಸೂಚಿಯಂತೆ ಪೊಲೀಸ್ ಇಲಾಖೆ ತನ್ನ ಕಾನೂನಿನ ಚೌಕಟ್ಟಿನಲ್ಲಿ ಈ ಕುರಿತು ಕಾರ್ಯನಿರ್ವಹಿಸುವದು ಎಂದು ಸಚಿವರು ಸೂಚ್ಯವಾಗಿ ಉತ್ತರಿಸಿದರು.

ಸುದೀರ್ಘ ಸಭೆ : ಕರ್ನಾಟಕ ದಕ್ಷಿಣ ವಲಯ ಐಜಿ ವಿಫುಲ್‍ಕುಮಾರ್ ಉಪಸ್ಥಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಮೂವರು ಡಿವೈಎಸ್‍ಪಿಗಳು, ಪೊಲೀಸ್ ವೃತ್ತ ನಿರೀಕ್ಷಕರುಗಳೊಂದಿಗೆ ಆ ಮುನ್ನ 2 ಗಂಟೆಗಳ ಸಭೆ ನಡೆಸಿದ ಗೃಹ ಸಚಿವರು, ಕೊಡಗು ಪೊಲೀಸ್ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ತಿಳಿ ಹೇಳಿದರು.

ಶ್ಲಾಘನೀಯ ಮಾತು : ಸಭೆ ಬಳಿಕ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದ ಪೊಲೀಸ್ ಅಧಿಕಾರಿಗಳ ತಂಡ, ಗೃಹ ಸಚಿವ ಬೊಮ್ಮಾಯಿ ಅವರು, ಸಮರ್ಥ ಖಾತೆ ಹೊಂದಿದ್ದು, ಇಲಾಖೆಯ ಸಮಗ್ರ ವಿಷಯಗಳನ್ನು ಅರ್ಥೈಸಿಕೊಂಡಿದ್ದಾರೆ ಎಂದು ಶ್ಲಾಘನೀಯ ನುಡಿಗಳನ್ನು ವ್ಯಕ್ತಪಡಿಸುತ್ತಿರುವ ಅಂಶ ಕೇಳಿ ಬಂತು.