ಸೋಮವಾರಪೇಟೆ, ನ. 5: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಮೀಪವಿರುವ ಕಲ್ಲುಗಣಿಗಾರಿಕೆಗೆ ಮತ್ತೊಮ್ಮೆ ಪರವಾನಗಿ ನೀಡಿದರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು. ಇದರೊಂದಿಗೆ ನ್ಯಾಯಾಲಯದಲ್ಲೂ ಮೊಕದ್ದಮೆ ದಾಖಲಿಸಲಾಗುವದು ಎಂದು ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪದ್ಮಾವತಿ, ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿ ಕಾಡನೂರು ಗ್ರಾಮದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಮೂರು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿಗಳು ರದ್ದುಗೊಳಿಸಿದ್ದರು. ಈಗ ಬೇನಾಮಿ ಹೆಸರಿನಲ್ಲಿ ಗಣಿಗಾರಿಕೆಯನ್ನು ಪ್ರಾರಂಭಿಸಲು ತಯಾರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಈಗಿನ ಜಿಲ್ಲಾಧಿಕಾರಿಗಳಿಗೆ ಕಲ್ಲುಗಣಿಗಾರಿಕೆಯ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೂ ಸಹ ಪರವಾನಗಿ ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ. ತಕ್ಷಣ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ವಾಸ್ತವಾಂಶದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು.
ಗಣಿಯಲ್ಲಿನ ಯಂತ್ರಗಳ ಶಬ್ಧದಿಂದ ಎಲ್ಲರೂ ಆತಂಕ ಗೊಳ್ಳುವಂತಾಗಿದೆ. ಮತ್ತೊಮ್ಮೆ ಗಣಿಗಾರಿಕೆ ಪ್ರಾರಂಭಗೊಂಡರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ನೇರುಗಳಲೆ ಯಲ್ಲಿರುವುದು ಒಂದೇ ಸರ್ಕಾರಿ ಶಾಲೆ. ಒಟ್ಟು 170 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿದ್ದಾರೆ. ಕಿರಿದಾದ ರಸ್ತೆಯಲ್ಲಿ ಗಣಿಗಾರಿಕೆ ಲಾರಿಗಳು ಸಂಚರಿಸಬೇಕು. ಅದೇ ರಸ್ತೆಯಲ್ಲಿ ಮಕ್ಕಳು ನಡೆಯಬೇಕು. ಇದರೊಂದಿಗೆ ಪರಿಸರವೂ ಹಾಳಾಗಲಿದ್ದು, ಅನಾಹುತಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಪಿ.ಸುರೇಶ್, ಉಪಾಧ್ಯಕ್ಷ ಆಲ್ಫೋನ್ಸ್ ಲೋಬೋ, ಗ್ರಾ.ಪಂ. ಮಾಜೀ ಅಧ್ಯಕ್ಷ ಲೋಕಾನಂದ, ಸ್ಥಳೀಯರಾದ ಮಹಮ್ಮದ್ ಅವರುಗಳು ಉಪಸ್ಥಿತರಿದ್ದರು.