ಸಿದ್ದಾಪುರ, ನ. 5: ನೆಲ್ಲಿಹುದಿಕೇರಿಯ ಅತ್ತಿಮಂಗಲದಿಂದ ನಲ್ವತ್ತೇಕರೆ-ಬರಡಿಗೆ ತೆರಳುವ ಸಾರ್ವಜನಿಕ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು, ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದಶಕಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿದ್ದ ರಸ್ತೆಯನ್ನು ಜನಪ್ರತಿನಿಧಿಗಳು ದುರಸ್ತಿಪಡಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ನಲ್ವತ್ತೇಕರೆ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯು ಕಳೆದ ಕೆಲವು ವರ್ಷಗಳಿಂದ ಡಾಂಬರು ಕಿತ್ತುಹೋಗಿದ್ದು, ಗುಂಡಿಗಳಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ. ನಲ್ವತ್ತೇಕರೆ ಗ್ರಾಮವು ಸುಮಾರು 3,000 ಜನಸಂಖ್ಯೆಯನ್ನು ಹೊಂದಿರುವ ಗ್ರಾಮವಾಗಿದ್ದು, ಇಲ್ಲಿನ ನಿವಾಸಿಗಳು ಮಡಿಕೇರಿ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಈ ರಸ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇತ್ತೀಚೆಗೆ ಬರಡಿಗೆ ತೆರಳುವ ಮತ್ತೊಂದು ರಸ್ತೆಯನ್ನು ದುರಸ್ತಿಪಡಿಸುವ ಸಂದರ್ಭ ಇಲ್ಲಿನ ಗ್ರಾಮಸ್ಥರು ಪರ್ಯಾಯ ರಸ್ತೆ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಾಮಗ್ರಿಗಳನ್ನು ತರಲು ಬಾಡಿಗೆ ವಾಹನಗಳು ಕೂಡ ಹಿಂದೇಟು ಹಾಕುತ್ತಿವೆ. ಬಡ ವರ್ಗದ ಮಂದಿ ಹೆಚ್ಚಾಗಿ ವಾಸಿಸುತ್ತಿರುವ ನಲ್ವತ್ತೇಕರೆಗೆ ತೆರಳಲು ದುಪ್ಪಟ್ಟು ಬಾಡಿಗೆಯನ್ನು ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. - ವಾಸು