ಕುಶಾಲನಗರ, ನ. 5: ಕುಶಾಲನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ರೂ. 90 ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ. ಬಸ್ ನಿಲ್ದಾಣದ ಸುತ್ತ ಆವರಣ ಗೋಡೆ ನಿರ್ಮಾಣ, ರೂಫಿಂಗ್ ಕಾಮಗಾರಿ ಸೇರಿದಂತೆ ನಿಲ್ದಾಣದಿಂದ ಹೊರಹೋಗುವ ಬಸ್‍ಗಳಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ. ಕುಶಾಲನಗರ ಬಸ್ ನಿಲ್ದಾಣದ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದಂತೆ ನೆರೆಯ ರಾಜ್ಯಗಳಿಗೆ ಅಂದಾಜು 500ಕ್ಕೂ ಅಧಿಕ ಬಸ್‍ಗಳು ಸಂಚರಿಸುತ್ತಿದ್ದು ದಿನನಿತ್ಯ 25 ಸಾವಿರಕ್ಕೂ ಅಧಿಕ ಪ್ರಯಾಣಿಕರು ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಸಾರಿಗೆ ಸಂಸ್ಥೆ ಹಮ್ಮಿಕೊಂಡಿದೆ.
ನಿಲ್ದಾಣದಿಂದ ತೆರಳುವ ಸ್ಥಳೀಯ ಬಸ್‍ಗಳು ಹೊರ ಜಿಲ್ಲೆಗಳ ಬಸ್‍ಗಳು ಹಾಗೂ ಅಂತರಾಜ್ಯ ಬಸ್‍ಗಳಿಗೆ ಪ್ರತ್ಯೇಕ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.