ಮಡಿಕೇರಿ, ನ.5: ಕಳೆದ ವರ್ಷ (2019-20) ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಈಗಾಗಲೇ ಹಣ ನೀಡಲಾಗಿದ್ದು, ಪ್ರಥಮ ಹಂತದಲ್ಲಿ ಹಣ ಪಡೆದ ಶೇ.50ರಷ್ಟು ಸಂತ್ರಸ್ತರು ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂಬ ಮಾಹಿತಿ ಇದ್ದು, ಕೂಡಲೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಗುರುವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪ್ರಕೃತಿ ವಿಕೋಪ ದಿಂದ ಮನೆ ಕಳೆದುಕೊಂಡ ಸಂತ್ರಸ್ತರು, ಈಗಾಗಲೇ ಹಣ ಪಡೆದು ಮನೆ ನಿರ್ಮಿಸಿಕೊಳ್ಳದಿದ್ದಲ್ಲಿ, ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕಾಗುತ್ತದೆ. ಮನೆ ನಿರ್ಮಾಣಕ್ಕೆ ಮುಂದಾಗಬೇಕು. ಮನೆ ನಿರ್ಮಾಣ ಕಾಮಗಾರಿ ಪ್ರಗತಿ ಸಂಬಂಧ ಜಿಪಿಎಸ್ ಮೂಲಕ ಮಾಹಿತಿ ನೀಡಿದಲ್ಲಿ ಎರಡನೇ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಅಂಗನವಾಡಿ, ವಸತಿ ಶಾಲೆಗಳು, ಅಂಬೇಡ್ಕರ್ ಮತ್ತು ದೇವರಾಜ ಅರಸು ಭವನ, ಬಾಲ ಮಂದಿರಗಳಿಗೆ ಜಾಗ ನೀಡುವ ಸಂದರ್ಭದಲ್ಲಿ ಗ್ರಾ.ಪಂ.ಗೆ ಎನ್‍ಒಸಿ ನೀಡುವಂತೆ ಕಳುಹಿಸುವುದು ಬೇಡ ಎಂದು ತಹಶೀಲ್ದಾರರಿಗೆ ತಾಕೀತು ಮಾಡಿದರು.
ತಹಶೀಲ್ದಾರ್ ಹಂತದಲ್ಲಿಯೇ ಪರಿಶೀಲಿಸಿ ಸರ್ಕಾರಿ ಕಚೇರಿ ಕಟ್ಟಡಗಳು, ಅಂಗನವಾಡಿ, ವಿದ್ಯಾರ್ಥಿ ನಿಲಯ ಮತ್ತಿತರಕ್ಕೆ ಜಾಗ ಒದಗಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಜಾಗ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರಿಂದ ಮಾಹಿತಿ ಪಡೆದು ಹಿಂಬರಹ ನೀಡಬೇಕು ಎಂದು ಸೂಚಿಸಿದರು.
ರೈತ ಸಂಪರ್ಕ ಕೇಂದ್ರಗಳು, ಕಸ ವಿಲೇವಾರಿ ಘಟಕ ನಿರ್ಮಾಣ ಸಂಬಂಧ ಕಾಲಮಿತಿಯೊಳಗೆ ಜಾಗ ಒದಗಿಸಬೇಕು. ಭೂಮಾಪನ ಇಲಾಖೆಯಿಂದ ಬಾಕಿ ಇರುವ ಸರ್ವೆ ಕಡತಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.
ತಾ.ಪಂ.ಇಒಗಳು ಪಿಡಿಒಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ತಮ್ಮ ತಾ.ಪಂ.ವ್ಯಾಪ್ತಿಯಲ್ಲಿ ಜಾಗ ಮತ್ತಿತರ ಕಂದಾಯಕ್ಕೆ ಸಂಬಂಧಿಸಿದಂತೆ ಕೆಲಸಗಳು ಆಗಬೇಕಿದ್ದಲ್ಲಿ ಪಟ್ಟಿ ಮಾಡಿಕೊಂಡು ಬರಬೇಕು. ನಿಖರ ಮಾಹಿತಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ತಾ.ಪಂ.ಇಒಗಳು ಮತ್ತು ತಹಶೀಲ್ದಾರರು ಜೊತೆಗೂಡಿ ಕೆಲಸ ಮಾಡಿದಾಗ ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸಬಹುದು, ಸಮಸ್ಯೆ ಗಳಿದ್ದಲ್ಲಿ ಕಂದಾಯಾಧಿಕಾರಿಗಳ ಸಭೆಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಘನ ತ್ಯಾಜ್ಯ ವಿಲೇವಾರಿ ಘಟಕ, ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿ ಕಾಯ್ದಿರಿಸುವುದು, ಮನೆಗಳ ನಿರ್ಮಾಣ ಹೀಗೆ ಹಲವು ಕಾರ್ಯಗಳ ಬಗ್ಗೆ ಗಮನಹರಿಸಬೇಕಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ ಅವರು ಅರಣ್ಯ ಇಲಾಖೆ ಭೂಮಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ಭೂ ದಾಖಲೆಗಳ ಸರ್ವೇ ಕಾರ್ಯ ಮತ್ತಿತರ ಪ್ರಗತಿ ಬಗ್ಗೆ ಮತ್ತು ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ವಿವಿಧ ಇಲಾಖೆಗಳು ಜಾಗಕ್ಕೆ ಅರ್ಜಿ ಸಲ್ಲಿಸಿರುವ ಇತ್ಯರ್ಥ ಸಂಬಂಧ ಮಾಹಿತಿ ನೀಡಿದರು.
ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಅವರು ಈಗಾಗಲೇ 97 ರಷ್ಟು ಬೆಳೆ ಸಮೀಕ್ಷೆ ನಡೆದಿದ್ದು, ಆಧಾರ್ ಲಿಂಕ್ ಮಾಡಬೇಕಿದೆ ಎಂದು ಹೇಳಿದರು. ತಾ.ಪಂ. ಇಒಗಳಾದ ಲಕ್ಷ್ಮೀ (ಮಡಿಕೇರಿ), ಜಯಣ್ಣ (ಸೋಮವಾರಪೇಟೆ) ಮತ್ತು ಅಪ್ಪಣ್ಣ (ವೀರಾಜಪೇಟೆ), ತಹಶೀಲ್ದಾರರಾದ ಮಹೇಶ್ (ಮಡಿಕೇರಿ), ಗೋವಿಂದರಾಜು (ಸೋಮವಾರಪೇಟೆ), ನಂದೀಶ್ (ವೀರಾಜಪೇಟೆ) ಅವರು ಕಂದಾಯ ಜಾಗ ಮಂಜೂರು ಮಾಡಿರುವ ಬಗ್ಗೆ ಹಲವು ಮಾಹಿತಿ ನೀಡಿದರು.
ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ, ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್, ಇತರರು ಇದ್ದರು.