ಸೋಮವಾರಪೇಟೆ, ನ. 5: ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯಾಗಿಯೇ ಚುನಾವಣೆ ಎದುರಿಸಲಿವೆ ಎಂದು ಎರಡೂ ಪಕ್ಷಗಳ ಅಧ್ಯಕ್ಷರುಗಳು ಜಂಟಿಯಾಗಿ ಘೋಷಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಹಾಗೂ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಅವರುಗಳು, ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಾಗಿಯೇ ಎದುರಿಸಲಿವೆ ಎಂದರು.

ಕಳೆದ ಎರಡು ವರ್ಷಗಳ ಹಿಂದೆ ನಡೆದ ಪ.ಪಂ. ಚುನಾವಣೆಯಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿತ್ತು. ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಜಯಗಳಿಸಿದ್ದರೂ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಮೀಸಲಾತಿಯಡಿ ಅಧ್ಯಕ್ಷ ಸ್ಥಾನ ಪಡೆದಿದೆ. ಆದರೆ ಪ.ಪಂ.ನಲ್ಲಿ ಮೈತ್ರಿ ಪಕ್ಷಗಳಿಗೆ ಬಹುಮತ ಇದ್ದು, ಮೈತ್ರಿ ಕೂಟಕ್ಕೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ ಎಂದರು. ಪಟ್ಟಣದ ಅಭಿವೃದ್ಧಿ ವಿಚಾರಗಳಿಗೆ ಮಾತ್ರ ಸಹಕಾರ ನೀಡಲಾಗುವದು ಎಂದರು.

ಇಂದಿಗೂ ಮೈತ್ರಿ ಮುಂದುವರೆದಿದ್ದರ ಪರಿಣಾಮ ಕಾಂಗ್ರೆಸ್‍ನ ಸಂಜೀವ ಅವರಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ. ಕುಶಾಲನಗರದಲ್ಲಿ ಬಿಜೆಪಿ ತೋರಿದ ಆಟ ಇಲ್ಲಿ ನಡೆಯಲು ಆಸ್ಪದ ನೀಡಲಿಲ್ಲ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಪ.ಪಂ.ನಲ್ಲಿ ಬಿಜೆಪಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಇಲ್ಲಿ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಹೆಚ್ಚಿನ ಅಭಿವೃದ್ಧಿ ಕಾಣಬೇಕು. ಪ.ಪಂ. ಸುತ್ತಮುತ್ತಲ ಗ್ರಾಮಗಳಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ನೂತನ ಯೋಜನೆಗಳನ್ನು ಕಾರ್ಯಗತ ಗೊಳಿಸಬೇಕು ಎಂದರು.

ಇದರೊಂದಿಗೆ ಪ.ಪಂ. ಹೈಟೆಕ್ ಮಾರುಕಟ್ಟೆ ಅವ್ಯವಸ್ಥೆಯ ತಾಣವಾಗಿದೆ. ಪಾರ್ಕಿಂಗ್ ಸಮಸ್ಯೆ ಮಿತಿಮೀರಿದ್ದು, ಹಲವಷ್ಟು ಮಳಿಗೆಗಳು ವಿಲೇವಾರಿಯಾಗದೇ ಬಾಕಿ ಉಳಿದಿದೆ. ಇವುಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷರು ಗಮನಹರಿಸಬೇಕು. ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಶಾಸಕರಿಗೆ ನಾವುಗಳೂ ಸಹಕಾರ ನೀಡುತ್ತೇವೆ ಎಂದರು.

ಈವರೆಗೆ ಕೊಡಗು ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿಸಲಾಗಿದೆ. ನಾವುಗಳು ಮೈತ್ರಿ ಮಾಡಿಕೊಂಡ ಫಲವಾಗಿ ಸೋಮವಾರಪೇಟೆಯಲ್ಲಿ ಬಹುಮತ ಗಳಿಸಿದ್ದೇವೆ. ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳಲ್ಲೂ ಮೈತ್ರಿ ಮುಂದುವರೆಯಲಿದ್ದು, ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪ.ಪಂ. ಉಪಾಧ್ಯಕ್ಷ ಬಿ. ಸಂಜೀವ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪ.ಪಂ. ಸದಸ್ಯೆ ಶೀಲಾ ಡಿಸೋಜ, ಜೆಡಿಎಸ್‍ನ ಪ.ಪಂ. ಸದಸ್ಯೆ ಜಯಂತಿ ಶಿವಕುಮಾರ್, ಪ.ಪಂ. ಕಾಂಗ್ರೆಸ್ ಸದಸ್ಯ ಉದಯಶಂಕರ್, ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಹೆಚ್.ಎ. ನಾಗರಾಜು ಅವರುಗಳು ಉಪಸ್ಥಿತರಿದ್ದರು.