ವೀರಾಜಪೇಟೆ ವರದಿ, ನ. 5: ಆಕಸ್ಮಿಕವಾಗಿ ಬಾಲಕನೋರ್ವ ಆಳವಾದ ಬಾವಿಗೆ ಬಿದ್ದು ಅಸುನೀಗಿರುವ ದಾರುಣ ಘಟನೆ ಸಂಭವಿಸಿದೆ. ವೀರಾಜಪೇಟೆ ಸಮೀಪದ ಅಂಬಟ್ಟಿ ಗ್ರಾಮದ ಸುಲೈಮಾನ್ ಎಂಬವರ ಪುತ್ರ ನಿಜಾಮುದ್ದೀನ್ (11) ಮೃತ ದುರ್ದೈವಿ ಬಾಲಕನಾಗಿದ್ದಾನೆ.
ಇಂದು ಮಧ್ಯಾಹ್ನ ಬೂದಿಮಾಳದ ತೋಟದಲ್ಲಿ ಸಹೋದರ ಸಿಯಾಬುದ್ದಿನ್ ನೊಂದಿಗೆ ಆಟವಾಡುತ್ತಿದ್ದ ನಿಜಾಮುದ್ದೀನ್ ಆಯತಪ್ಪಿ 25 ಅಡಿ ಆಳದ ಬಾವಿಗೆ ಬಿದ್ದಿದ್ದಾನೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಸುಲೈಮಾನ್ ಹಾಗೂ ಅಕ್ಕಪಕ್ಕದ ನಿವಾಸಿಗಳು ಮಗುವನ್ನು ಬಾವಿಯಿಂದ ಮೇಲಕ್ಕೆತ್ತಿದರಾದರೂ ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತ ನಿಜಾಮುದ್ದೀನ್ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿಯಾಗಿದ್ದ. ಸುಲೈಮಾನ್ ಕೇರಳದ ಮಾಲೀಕರೋರ್ವರ ಒಡೆತನದಲ್ಲಿರುವ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಂದು ಮಕ್ಕಳನ್ನು ಕೂಡ ತೋಟಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ವೀರಾಜಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಕ್ಯೂಟ್ ಕೂರ್ಗ್ ನ್ಯೂಸ್