ಸೋಮವಾರಪೇಟೆ, ನ. 5: ಸೋಮವಾರಪೇಟೆ ಪಟ್ಟಣ ಪಂಚಾ ಯಿತಿ ವ್ಯಾಪ್ತಿಯಲ್ಲಿರುವ ಮಾರ್ಕೆಟ್ ಏರಿಯಾ ಅಶುಚಿತ್ವದ ತಾಣವಾಗಿದ್ದು, ಇಲ್ಲಿರುವ ಶೌಚಾಲಯ ನಿರ್ವಹಣೆಯ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ.
ಪ.ಪಂ. ವತಿಯಿಂದ ಶೌಚಾಲ ಯವನ್ನು ನಿರ್ಮಾಣ ಮಾಡಿದ್ದು ಬಿಟ್ಟರೆ, ಸಮರ್ಪಕ ನಿರ್ವಹಣೆ ಇಲ್ಲದೇ ದುರ್ವಾಸನೆ ಬೀರುವ ಫ್ಯಾಕ್ಟರಿಯಾಗಿ ಪರಿವರ್ತನೆಯಾಗಿದೆ. ಈ ಶೌಚಾಲಯಕ್ಕೆ ನಿರ್ಮಿಸಿರುವ ಗುಂಡಿ ಆಗಾಗ್ಗೆ ತುಂಬುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಾರ್ಕೆಟ್ ಏರಿಯಾ ನಿವಾಸಿಗಳು ಮೂಗುಮುಚ್ಚಿಕೊಂಡು ದಿನ ದೂಡುವಂತಾಗಿದೆ. ಇಲ್ಲಿನ ಮಾರ್ಕೆಟ್ ಏರಿಯಾದಲ್ಲಿ ಹೈಟೆಕ್ ಮಾರುಕಟ್ಟೆ, ಪ.ಪಂ. ವಾಣಿಜ್ಯ ಸಂಕೀರ್ಣಗಳಿದ್ದು, ದಿನಂಪ್ರತಿ ನೂರಾರು ಮಂದಿ ಸಾರ್ವಜನಿಕರು ಆಗಮಿಸುತ್ತಿರುತ್ತಾರೆ. ಇವರುಗಳಿಗೆ ಬಳಕೆಯಾಗುವ ಉದ್ದೇಶದಿಂದ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಶೌಚಾಲಯಕ್ಕೆ ತೆರಳಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ.
ನೀರಿನ ಅವ್ಯವಸ್ಥೆಯೊಂದಿಗೆ ಪಿಟ್ ಗುಂಡಿ ತುಂಬಿದ್ದು, ಶೌಚಾಲಯದ ಕೊಳಚೆ ನೀರು, ಗುಂಡಿಯ ನೀರು ಶೌಚಾಲಯದ ಆವರಣ ಸೇರಿದಂತೆ ರಸ್ತೆಯ ಮೇಲೆಯೇ ಹರಿಯುತ್ತಿದೆ. ಪರಿಣಾಮ ಕ್ರಿಮಿಕೀಟಗಳ ಆವಾಸಸ್ಥಾನವಾಗಿದ್ದು, ವಾತಾವರಣವೂ ದುರ್ಗಂಧ ಮಯವಾಗಿದೆ. ಸಂಬಂಧಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಶೌಚಾಲಯದ ಅವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ನೆಮ್ಮದಿಯ ವಾತಾವರಣ ನಿರ್ಮಿಸಬೇಕು. ಶೌಚಾಲಯದ ಗುಂಡಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.