ವರದಿ-ಚಂದ್ರಮೋಹನ್
ಕುಶಾಲನಗರ, ನ. 5: ಕುಶಾಲನಗರ ಪಟ್ಟಣ ಪಂಚಾಯ್ತಿ ಆಡಳಿತ ಬಿಜೆಪಿ ಮತ್ತು ಜೆಡಿಎಸ್ ತೆಕ್ಕೆಗೆ ಒಲಿದ ಬೆನ್ನಲ್ಲೇ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಚುನಾವಣೆ ನಡೆದ ನಂತರ ಜೆಡಿಎಸ್ ಪಕ್ಷದಲ್ಲಿ ರಾಜಕೀಯ ಕೆಸರೆರಚಾಟ ಪ್ರಾರಂಭಗೊಂಡಿದೆ. ಪಟ್ಟಣ ಪಂಚಾಯ್ತಿಯ ಆಡಳಿತ ಚುಕ್ಕಾಣಿ ಹಿಡಿಯಲು ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸಿರುವುದು ತೆರೆಮರೆಯಲ್ಲಿದ್ದರೂ ಬಿಜೆಪಿ ಮಾತ್ರ ಇದರಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ನ ಕೆಲವು ಗುಂಪುಗಳಲ್ಲಿ ಒಂದು ಗುಂಪಿನ ನಾಯಕರು ಮಾತ್ರ ಅಧ್ಯಕ್ಷ ಗಾದಿಗೆ ಜೆಡಿಎಸ್ನೊಂದಿಗೆ ಮೈತ್ರಿಗೆ ಪ್ರಯತ್ನಿಸಿದರೂ ಅದು ಕೊನೆಯ ಗಳಿಗೆಯಲ್ಲಿ ವಿಫಲವಾಗಿತ್ತು. ಇದೀಗ ಜೆಡಿಎಸ್ ಹೈಕಮಾಂಡ್ ಸೂಚನೆಯಂತೆ ಮೈತ್ರಿ ನಡೆದಿದೆ ಎಂದರೂ ಸಮಾಧಾನವಾಗದ ಜಿಲ್ಲಾ ಜೆಡಿಎಸ್ ಪಟ್ಟಣ ಪಂಚಾಯ್ತಿಯ ಮೂವರು ಜೆಡಿಎಸ್ ಸದಸ್ಯರನ್ನು ಅಮಾನತುಗೊಳಿಸಿದೆ ಎಂದಿದೆ. ಪಕ್ಷದ ನೆಲೆ ಭದ್ರಗೊಳಿಸಲು ಹಾಗೂ ಬೆಳವಣಿಗೆ ನಿಟ್ಟಿನಲ್ಲಿ ಸಂಸದ ಹಾಗೂ ಜೆಡಿಎಸ್ ರಾಜ್ಯ ಪ್ರಮುಖರಾದ ಪ್ರಜ್ವಲ್ ರೇವಣ್ಣ ಅವರ ಆದೇಶದಂತೆ ಎಲ್ಲಾ ನಡೆದಿದೆ ಎನ್ನುತ್ತಾರೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸುರಯ್ಯಭಾನು. ಉಳಿದ ಸದಸ್ಯರಾದ ಬಿ.ಎಲ್.ಜಗದೀಶ್ ಮತ್ತು ಎಂ.ಬಿ.ಸುರೇಶ್ ಅವರದ್ದೂ ಇದೇ ಸ್ಪಷ್ಟನೆಯಾಗಿದೆ.
ಆದರೆ ಜೆಡಿಎಸ್ನಲ್ಲಿ ಒಂದು ಗುಂಪು ಮಾತ್ರ ಕೋಮುವಾದಿ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿರುವುದು ಸರಿಯಲ್ಲ ಎನ್ನುತ್ತಿದೆ. ಈ ಮೂಲಕ ಸ್ಥಳೀಯವಾಗಿ ಈ ವಿಷಯ ಚರ್ಚೆಗೆ ಒಳಗಾಗಿದೆ. ಕಾಂಗ್ರೆಸ್ ಮಾತ್ರ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಚಟುವಟಿಕೆ ನಡೆಸಿಲ್ಲ ಎನ್ನುವುದು ಬಹಿರಂಗವಾಗಿ ಕಂಡುಬರುತ್ತಿದೆ. ಬಿಜೆಪಿ ಅಧ್ಯಕ್ಷ ಸ್ಥಾನ ಪಡೆಯುವುದರೊಂದಿಗೆ ಮೈತ್ರಿಗೆ ಸಹಕರಿಸಿದ ಜೆಡಿಎಸ್ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿ ಸೇರಿದಂತೆ ಕುಡಾ ನಾಮನಿರ್ದೇಶನ ಸದಸ್ಯತ್ವ ಕೂಡ ನೀಡುವ ಒಪ್ಪಂದ ನಡೆದಿದೆ.
ಅಧ್ಯಕ್ಷ ಸ್ಥಾನ ಗಾದಿಗೆ ಬಿಜೆಪಿಗಿದ್ದ ಏಕೈಕ ಸದಸ್ಯ ಜಯವರ್ಧನ ಅವರು ಶಾಸಕರು ಹಾಗೂ ಸ್ಥಳೀಯ ಪಕ್ಷದ ಪ್ರಮುಖರ ಸಹಾಯದೊಂದಿಗೆ ಎಲ್ಲಾ ರೀತಿಯ ಕಸರತ್ತು ಮಾಡಿ ಗಾದಿಗೆ ಏರುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಕಳೆದ 15 ದಿನಗಳಿಂದ ಜೆಡಿಎಸ್ ಪಕ್ಷದ ಮೂವರು ಸದಸ್ಯರೊಂದಿಗೆ ಬೆಂಗಳೂರು, ಹಾಸನ, ಶಿರಾ ಮುಂತಾದೆಡೆ ತೆರಳಿ ಜೆಡಿಎಸ್ ಹೈಕಮಾಂಡ್ ಒಪ್ಪಿಗೆ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಚಾಣಾಕ್ಷತನ ಮತ್ತು ಸ್ಥಳೀಯ ಬಿಜೆಪಿ ಪ್ರಮುಖರ ಮಾತುಕತೆ ಕೂಡ ಸಫಲವಾಗಲು ಪ್ರಮುಖ ಕಾರಣವಾಯಿತು.
ಇತ್ತ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಲಿ, ತಾಲೂಕು ಅಥವಾ ಸ್ಥಳೀಯ ಘಟಕಗಳ ಅಧ್ಯಕ್ಷರುಗಳಾಗಲಿ ಕುಶಾಲನಗರ ಪಪಂ ಗಾದಿಯ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದಿರುವುದು ಎದ್ದು ಕಾಣುತ್ತಿತ್ತು. ಕಾಂಗ್ರೆಸ್ ಪ್ರಮುಖರಾದ ಕೆ.ಪಿ.ಚಂದ್ರಕಲಾ ಮತ್ತು ವಿ.ಪಿ.ಶಶಿಧರ್ ಜೆಡಿಎಸ್ ನಾಯಕರಾದ ಪ್ರಜ್ವಲ್ ಅವರೊಂದಿಗೆ ಮಾತುಕತೆ ಮಾಡಿದರೂ ಯಾವುದೇ ಫಲ ದೊರಕಿಲ್ಲ ಎನ್ನುವುದು ಸತ್ಯ. ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ ಬಹುಮತದ ಕೊರತೆ ಇದ್ದ ಕಾರಣ ಜಿಲ್ಲಾ ಕಾಂಗ್ರೆಸ್ ಯಾವುದೇ ರೀತಿಯ ರಾಜಕೀಯ ಚಟುವಟಿಕೆ ನಡೆಸಿಲ್ಲ ಎಂದು ಕೆಪಿಸಿಸಿ ಸದಸ್ಯರು ಹಾಗೂ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಈ ನಡುವೆ ಚುನಾವಣೆ ಎಲ್ಲಾ ಮುಗಿದ ನಂತರ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು ಗುರುವಾರ ಹೊಳೆನರಸಿಪುರಕ್ಕೆ ತೆರಳಿ ಪ್ರಜ್ವಲ್ ಮತ್ತು ಮಾಜಿ ಸಚಿವ ರೇವಣ್ಣ ಅವರನ್ನು ಕಂಡು ಕೃತಜ್ಞತೆ ಸಲ್ಲಿಸುವ ಕಾಯಕ ಮಾಡಿದ್ದು ಕಂಡುಬಂದಿದೆ.
ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಚರ್ಚೆ ನಡೆಸಲು ಅವಕಾಶ ದೊರೆಯಲಿಲ್ಲ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಶಬ್ಬೀರ್ ಶಕ್ತಿಗೆ ತಿಳಿಸಿದ್ದಾರೆ. ಕುಶಾಲನಗರದ ಕಾಂಗ್ರೆಸ್ನಲ್ಲಿ ಈಗಾಗಲೆ ಕೆಲವು ಗುಂಪುಗಳಾಗಿ ಕಂಡುಬಂದಿದ್ದರೆ ಇದೀಗ ಜೆಡಿಎಸ್ನಲ್ಲಿ ಕೂಡ ಎರಡು ಗುಂಪು ಸೃಷ್ಠಿಯಾಗಲು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷ ಗಾದಿ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಮುಂದಿನ ಅಧಿಕಾರ ಅವಧಿಯಲ್ಲಿ ಕುಶಾಲನಗರ ಪಟ್ಟಣದ ಶ್ರೇಯೋಭಿವೃದ್ಧಿಗೆ ರಾಜಕೀಯ ರಹಿತವಾಗಿ ತಾನು ಕೆಲಸ ನಿರ್ವಹಿಸುವುದಾಗಿ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷ ಜಯವರ್ಧನ್ ಭರವಸೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಮೈತ್ರಿ ಮಾಡುವ ಮೂಲಕ ಉಪಾಧ್ಯಕ್ಷ ಸ್ಥಾನ ಗಳಿಸಿದ ಜೆಡಿಎಸ್ನ ಸುರಯ್ಯಭಾನು ತನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಬಡಾವಣೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಚಿಂತನೆ ಮಾಡುವುದಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.