ಕೂಡಿಗೆ, ನ. 4: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಗುಂದ ಗ್ರಾಮದಲ್ಲಿರುವ ಹಾರಂಗಿ ಅಣೆಕಟ್ಟೆಯ ಮುಂಭಾಗದ ಸೇತುವೆಯನ್ನು ಮೇಲ್ಮಟ್ಟಕ್ಕೆ ಏರಿಸುವ ಸಾರ್ವಜನಿಕರ ಬೇಡಿಕೆಗೆ ಇಲಾಖೆ ವತಿಯಿಂದ ಸಿದ್ಧತೆಗಳು ನಡೆಯುತ್ತಿವೆ

ಹಾರಂಗಿ ಅಣೆಕಟ್ಟೆಯ ಮುಂಭಾಗದ ಹಾರಂಗಿ ನದಿಯ ಸೇತುವೆಯನ್ನು ಹೊಸದಾಗಿ ನಿರ್ಮಾಣ ಮಾಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮತ್ತು ನೀರಾವರಿ ಸಚಿವರಿಗೂ ಮನವಿ ಸಲ್ಲಿಸಲಾಗಿತ್ತು. ಅದರಂತೆ ರಾಜ್ಯ ಸರಕಾರದ ನೀರಾವರಿ ಇಲಾಖೆಯ ಅಡಿಯಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಹಾರಂಗಿ ನೀರಾವರಿ ಇಲಾಖೆಯ ಮುಖೇನ ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಹಾರಂಗಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವುದರಿಂದ ಕುಶಾಲನಗರ- ಸೋಮವಾರಪೇಟೆಗೆ ಹತ್ತಿರದ ಮಾರ್ಗ ಅಲ್ಲದೆ ಹುದುಗೂರು, ಮಾವಿನಹಳ್ಳ, ಸೀತೆಗದ್ದೆ, ಯಡವನಾಡು ಸೇರಿದಂತೆ ಹತ್ತು ಗ್ರಾಮಗಳ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುತ್ತದೆ. ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ಹರಿಸಿದಾಗ ತಳಮಟ್ಟದಲ್ಲಿರುವ ಸೇತುವೆ ಮುಳುಗಡೆ ಆಗಿ ರೈತರು ತಿರುಗಾಡಲು ತೊಂದರೆಗಳು ಆಗುತ್ತಿದ್ದವು. ಈ ಗ್ರಾಮಗಳ ಸಮಸ್ಯೆಯನ್ನು ಅರಿತ ಶಾಸಕರು ಸಾರ್ವಜನಿಕರ ಮತ್ತು ವಿವಿಧ ಸಂಘಟನೆಯ ಒತ್ತಾಯದ ಮೇರೆಗೆ ನೀರಾವರಿ ಸಚಿವರೊಂದಿಗೆ ಚರ್ಚಿಸಿದ ಪರಿಣಾಮವಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲು ಸೂಚನೆ ಬಂದಿರುವ ಹಿನ್ನೆಲೆ ಹಾರಂಗಿ ವಿಭಾಗದ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.