ಕುಶಾಲನಗರ, ನ. 4 : ಕಳೆದ ಎರಡು ದಶಕಗಳಿಂದ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲವು ಮಂದಿ ನಾಗರಿಕರು ದಿಢೀರ್ ಶ್ರೀಮಂತಿಕೆ ಕನಸಿನೊಂದಿಗೆ ನಕಲಿ ಹಣಕಾಸು ದಂಧೆಗೆ ಮನಸೋತು ಸಾವಿರಾರು ಮಂದಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ವಂಚನೆ ಗೊಳಗಾದ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ. 1990 ರ ದಶಕದ ತಲಕಾವೇರಿ ಕಾಂಪ್ಲೆಕ್ಸ್ ವಂಚನೆ ಪ್ರಕರಣದಿಂದ ಇತ್ತೀಚಿನ ನಕಲಿ ವೆಬ್‍ಸೈಟ್ ಪ್ರಕರಣ ಸೇರಿದಂತೆ ಮೂರು ದಶಕಗಳ ಅವಧಿಯಲ್ಲಿ ಇದುವರೆಗೆ ಅಂದಾಜು 1 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ಹೂಡಿಕೆ ಮಾಡುವ ಮೂಲಕ ಕೊಡಗು ಮತ್ತು ನೆರೆ ಜಿಲ್ಲೆಯ ಅಂದಾಜು 40 ಸಾವಿರಕ್ಕೂ ಅಧಿಕ ಮಂದಿ ಟೋಪಿ ಹಾಕಿಸಿಕೊಂಡ ಪ್ರಕರಣ ಇನ್ನೂ ಹಸಿರಾಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮನಿ ಚೈನ್ ದಂಧೆ ಕುಶಾಲನಗರದಲ್ಲಿ ತಲೆ ಎತ್ತಿದೆ.ಹಣ ಹೂಡಿಕೆಗೆ ಹಲವು ವಾಮ ಮಾರ್ಗಗಳನ್ನು ಕಂಡುಹಿಡಿದಿರುವ ಸಂಸ್ಥೆಗಳು ಮನಿ ಡಬ್ಲಿಂಗ್, ಪ್ರವಾಸಕ್ಕೆ ಕರೆದೊಯ್ಯುವುದು, ಐಷಾರಾಮಿ ವ್ಯವಸ್ಥೆಗಳ ಆಸೆ ಆಮಿಷ ಒಡ್ಡುವ ಮೂಲಕ ಜನರನ್ನು ಕುರಿ ಮಾಡುತ್ತಿರುವ ದಂಧೆ ಇದಾಗಿದ್ದು ಶೇ.100 ರಷ್ಟು ವಂಚನೆಗಳೇ ನಡೆಯುತ್ತಿರುವುದು ಇವುಗಳ ಮೂಲ ಗುರಿಯಾಗಿದೆ. ಇದೀಗ ಕುಶಾಲನಗರದಲ್ಲಿ ಬೃಹತ್ ಕಟ್ಟಡವೊಂದರಲ್ಲಿ ಇದೇ ಮಾದರಿಯ ಸಂಸ್ಥೆಯೊಂದರ ಕೇಂದ್ರ ಕಚೇರಿ ಕಾರ್ಯಾಚರಣೆ ಮಾಡುತ್ತಿದೆ. ಮೈಸೂರಿನಲ್ಲಿ ಇದರ ಉಪ ಕಚೇರಿ ಕೂಡ ಇದೆ ಎನ್ನಲಾಗಿದೆ. ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಇದೂ ಕೂಡ ವಂಚನೆಗಳ ಸರಮಾಲೆಗೆ ಸೇರುವುದು ಖಚಿತ. ಪತ್ರಿಕೆ ಮಾಧ್ಯಮಗಳು ಈ ಬಗ್ಗೆ ನಿರಂತರವಾಗಿ ವರದಿಗಳನ್ನು ಪ್ರಕಟಿಸುವ ಮೂಲಕ ಎಚ್ಚರಿಕೆ ನೀಡಿದರೂ ಕೆಲವು ಜನ ಮಾತ್ರ ವಂಚನೆಗೆ ಮಾರು ಹೋಗುತ್ತಿರುವುದು ನಡೆಯುತ್ತಲೇ ಇದೆ. ಇದಕ್ಕೆ ಮೂಲ ಕಾರಣ ಕೆಲವು ದಲ್ಲಾಳಿಗಳು. ಈ ಹಿಂದೆ ನಡೆದ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಹಣ ಹೂಡಿಕೆ ಪ್ರಕರಣದಲ್ಲಿ ವಂಚನೆಗೊಳಗಾದ ಮಹಿಳೆಯರ ಸಂಖ್ಯೆ ಸುಮಾರು 16 ಸಾವಿರ ಮಂದಿ. ಇಂತಹ ವಂಚನೆ ಪ್ರಕರಣಗಳಲ್ಲಿ ಪಾಲ್ಗೊಂಡು ಬಹುತೇಕ ದಲ್ಲಾಳಿಗಳು ಕುಶಾಲನಗರದಲ್ಲಿ ಈಗಾಗಲೆ ಕೋಟಿ ಕುಳಗಳಾಗಿದ್ದು ಕಾನೂನಿಗೆ ಮಣ್ಣೆರಚುವಲ್ಲಿ ಯಶಸ್ವಿಯಾಗಿದ್ದಾರೆ. ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಹಗರಣ, ಕೇರಳದ ಮನಿ ಡಬ್ಲಿಂಗ್ ಹಗರಣ, ಹಿಂದೂಸ್ಥಾನ್ ಇನ್ಫ್ರಾಕಾನ್, ಗ್ರೀನ್‍ಬಡ್ಸ್ ಹೀಗೆ ಹತ್ತಾರು ಕಂಪನಿಗಳ ಹೆಸರಿನಲ್ಲಿ ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿ ಪ್ರಾರಂಭದಲ್ಲೇ ಒಂದಕ್ಕೆ ಮೂರು ಪಟ್ಟು ಹಣ ನೀಡಿ ತಮ್ಮತ್ತ ಸೆಳೆಯುವಲ್ಲಿ ಈ ದಂಧೆಗಳ ದಲ್ಲಾಳಿಗಳು ಕಾರ್ಯೋನ್ಮುಖವಾಗುತ್ತಿದ್ದಾರೆ. ಹಂತಹಂತವಾಗಿ ಲಕ್ಷ, ಕೋಟಿ ಮೊತ್ತ ತಮ್ಮ ಜೇಬಿಗೆ ಬಂದ ತಕ್ಷಣ ಅವರೇ ಗುಲ್ಲೆಬ್ಬಿಸಿ ಇಡೀ ಸ್ಕೀಂ ಅನ್ನು ಗೊಂದಲಕ್ಕೆ ಈಡು ಮಾಡುವ ಮೂಲಕ ಜಾಗ ಖಾಲಿ ಮಾಡುವುದು ಕಾಯಕವಾಗಿದೆ.

(ಮೊದಲ ಪುಟದಿಂದ) ದುರಾದೃಷ್ಟ ಸಂಗತಿಯೆಂದರೆ ಇಂತಹ ದಂಧೆಯಲ್ಲಿ ಕೆಲವು ಇಲಾಖೆಗಳ ಹಿರಿಯ ಅಧಿಕಾರಿಗಳು, ನೌಕರರು ಸೇರಿದಂತೆ ಸ್ಥಳೀಯ ಗಣ್ಯ ವ್ಯಕ್ತಿಗಳು ಎನಿಸಿಕೊಂಡವರು ಕೂಡ ಹಣ ಹೂಡಿಕೆ ಮಾಡುತ್ತಿರು ವುದು ಮಾತ್ರ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಮೂಲಕ ಯಾವುದೇ ವಂಚನೆ ಪ್ರಕರಣಗಳು ಈ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಕೊಡುವಲ್ಲಿ ವಿಫಲವಾಗುತ್ತಿರುವುದು ನಿಜಕ್ಕೂ ವಿಷಾದನೀಯ.

ಇತ್ತೀಚೆಗಷ್ಟೆ ಕುಶಾಲನಗರದಲ್ಲಿ ನಕಲಿ ವೆಬ್‍ಸೈಟ್ ಬಳಸಿ 30 ಕೋಟಿ ರೂಗಳಿಗೂ ಅಧಿಕ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದರೂ ಆ ಬಗ್ಗೆ ತನಿಖೆ ಮಾತ್ರ ನಡೆಯುತ್ತಿದೆ. ದೂರು ದಾಖಲಾದರೆ ಮಾತ್ರ ಸಂಬಂಧಿಸಿದ ಪೊಲೀಸ್ ಇಲಾಖೆ ದಂಧೆಕೋರರ ಮೇಲೆ ಮೊಕದ್ದಮೆ ದಾಖಲಿಸುವುದು ವಾಡಿಕೆ ಯಾಗಿದ್ದು ನಂತರದ ದಿನಗಳಲ್ಲಿ ದಂಧೆಯಲ್ಲಿ ಪಾಲ್ಗೊಂಡ ಕಮಿಷನ್ ಏಜೆಂಟ್‍ಗಳು ಮಗದೊಂದು ಸ್ಕೀಂನತ್ತ ಅದೇ ಕುರಿಮಂದೆ ಜನರನ್ನು ನಂಬಿಸಿ ಮೋಸ ಮಾಡುವುದು ಇಲ್ಲಿನ ವಾಡಿಕೆಯಾಗಿದೆ. ಈ ದಂಧೆಗಳು ಅಕ್ರಮ ಹಾಗೂ ನಿಯಮ ಬಾಹಿರವಾದ ಹಿನ್ನೆಲೆಯಲ್ಲಿ ವಂಚನೆಗೊಳಗಾದ ಮಂದಿ ದೂರು ನೀಡಲು ಕೂಡ ಹಿಂಜರಿ ಯುವಂತಾಗಿದೆ. ಇನ್ನು ಈ ನಡುವೆ ಐಷಾರಾಮಿ ಜೀವನ ಕಂಡು ಮನಸೋತ ದಿಢೀರ್ ಶ್ರೀಮಂತಿಕೆ ಬಯಸುವ ಯುವಕರು ಸೇರಿದಂತೆ ಐಷಾರಾಮಿ ಜೀವನಕ್ಕೆ ಮನಸೋತ ಜನರ ತಂಡ ಇದರಲ್ಲಿ ತಮ್ಮ ಹಣ ಹೂಡಿಕೆ ಮಾಡುವುದು ನಂತರ ಲಬೋ ಲಬೋ ಬಾಯಿ ಬಡಿಯುವುದು ನಿರಂತರವಾಗಿ ನಡೆಯುತ್ತಿದೆ. ಇಂತಹ ದಂಧೆಕೋರರಿಗೆ ಕಠಿಣ ಶಿಕ್ಷೆಯಾಗುವುದರೊಂದಿಗೆ ವಂಚನೆ ಮಾಡಿದ ಹಣವನ್ನು ಮರಳಿ ಹೂಡಿಕೆದಾರರಿಗೆ ನೀಡುವ ಕಾಯಕ ಮಾತ್ರ ಇದುವರೆಗೆ ನಡೆದಿಲ್ಲ. ಪತ್ರಿಕೆಯಲ್ಲಿ ಮಾಹಿತಿ ಹೊರಬಿದ್ದ ಸಂದರ್ಭ ಮಾತ್ರ ಎಚ್ಚೆತ್ತುಕೊಳ್ಳುವ ಸರಕಾರದ ಇಲಾಖೆಗಳು ನಂತರ ಜಾಣ ಮೌನದಲ್ಲಿ ತೊಡಗುತ್ತಿರು ವುದು ಬೆಳವಣಿಗೆ ಯಾಗಿದೆ. ಆದರೆ ಕಾನೂನಿನ ಕಣ್ಣು ತಪ್ಪಿಸಿ ವಂಚಿಸಿದ ದಂಧೆಕೋರರು ಮಾತ್ರ ರಾಜಾರೋಷವಾಗಿ ಓಡಾಡುತ್ತಿರು ವುದು ಕಾಣಬಹುದು. ಇದರೊಂದಿಗೆ ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಚೀಟಿ ವ್ಯವಹಾರಗಳು ನಿರಂತರವಾಗಿ ನಡೆಯುತ್ತಿದ್ದು ಇದರಲ್ಲಿ ಹಣ ಹೂಡಿಕೆ ಮಾಡಿದ ಜನರು ಮೋಸ ಹೋಗಿದ್ದು ಈ ಬಗ್ಗೆ ಪೊಲೀಸ್ ದೂರು ನೀಡಲು ಅಸಹಾಯಕರಾಗಿ ಕಳೆದುಕೊಂಡ ಹಣದ ಬಗ್ಗೆ ರೋಧಿಸುತ್ತಿರುವ ಜನರ ಸಂಖ್ಯೆ ಕೂಡ ನಿತ್ಯ ಕಂಡುಬರುತ್ತಿರುವ ಅಂಶವಾಗಿದೆ.

ಕುಶಾಲನಗರದ ಮೈಸೂರು ರಸ್ತೆಯ ಮೆಕಾನಿಕ್ ಓರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಮೊಬೈಲ್ ಆಪ್‍ನಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿಯಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿ ವಂಚಿಸಿದಲ್ಲದೆ ಅಂದಾಜು 3 ರಿಂದ 4 ಕೋಟಿ ಮೊತ್ತದ ಚೀಟಿ ಹಣದೊಂದಿಗೆ ನಾಪತ್ತೆಯಾಗಿರು ವುದು ಇತ್ತೀಚಿನ ಪ್ರಕರಣವಾಗಿದೆ. ನಿವೃತ್ತ ಸೆಸ್ಕಾಂ ಅಧಿಕಾರಿಯೊಬ್ಬರು ಈ ಚೀಟಿ ವ್ಯವಹಾರದಲ್ಲಿ ತಮ್ಮ ಹಣ ತೊಡಗಿಸಿಕೊಂಡು ರೂ 22 ಲಕ್ಷಕ್ಕೂ ಅಧಿಕ ವಂಚನೆ ಗೊಳಗಾಗಿದ್ದು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ತಾನು ತನ್ನ ಪತ್ನಿ ಮತ್ತು ವಿದೇಶದಲ್ಲಿರುವ ಪುತ್ರ ಸೇರಿ ಲಕ್ಷಾಂತರ ಮೊತ್ತದ ಚೀಟಿಗೆ ಹಣ ಹೂಡಿಕೆ ಮಾಡಿದ್ದು ಇದೀಗ ಚೀಟಿ ನಡೆಸುತ್ತಿದ್ದ ಮಂಜುನಾಥ್ ಎಂಬಾತ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ರೀತಿ ಕುಶಾಲನಗರದ ಗಣಪತಿ ದೇವಾಲಯದ ಮುಂಭಾಗದಲ್ಲಿದ್ದ ರಾಜಸ್ಥಾನಿ ಮೂಲದ ವ್ಯಾಪಾರಿಯೊಬ್ಬ ಸ್ಥಳೀಯರಿಗೆ ಕೋಟಿಗಟ್ಟಲೆ ಹಣ ವಂಚನೆ ಮಾಡಿ ಪರಾರಿಯಾಗಿರು ವುದು ಇಂತಹ ಹಲವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸ್ಥಳೀಯ ಆಡಳಿತ ವ್ಯಾಪಾರ ವಹಿವಾಟು ಉದ್ದಿಮೆ ಪರವಾನಗಿ ನೀಡುವ ಸಂದರ್ಭ ಗ್ರಾಹಕರಿಗೆ ಕೂಡ ಅನುಕೂಲವಾಗುವ ರೀತಿಯಲ್ಲಿ ವಿಮಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ಹರಿಸಬೇಕು ಎನ್ನುವುದು ಹಿರಿಯ ವಕೀಲರಾದ ಆರ್.ಕೆ. ನಾಗೇಂದ್ರಬಾಬು ಅವರ ಅಭಿಪ್ರಾಯವಾಗಿದೆ. ಗ್ರಾಹಕರ ರಕ್ಷಣೆಗೆ ಸರಕಾರ ನೀತಿ ನಿಯಮ ರೂಪಿಸುವಂತಾಗಬೇಕು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇವರಲ್ಲದೆ ಕೆಲವು ಉದ್ಯಮಿಗಳು ಸೇರಿದಂತೆ ಹಲವರು ಲಕ್ಷಗಟ್ಟಲೆ ಹಣವನ್ನು ಹೂಡಿಕೆ ಮಾಡಿ ಇದೀಗ ವಂಚನೆಗೊಳಗಾಗಿ ಮನೆಯಲ್ಲಿಯೇ ರೋಧಿಸುತ್ತಿರುವ ಚಿತ್ರಣ ಬಹುತೇಕ ಕಾಣಬಹುದು. ಇಂತಹ ಪ್ರಕರಣಗಳ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರುವುದು ನಾಗರಿಕರ ಕರ್ತವ್ಯವಾಗಿದೆ ಎಂದು ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿದ್ದು, ಈ ಮೂಲಕ ವಂಚನೆ ಪ್ರಕರಣಗಳಿಗೆ ಕಡಿವಾಣ ಸಾಧ್ಯ ಎನ್ನುತ್ತಾರೆ. ದಾಖಲೆಗಳು ಇಲ್ಲದಿದ್ದಲ್ಲಿ ಕಾನೂನು ಕ್ರಮಕೈಗೊಳ್ಳುವುದು ಕೂಡ ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಬಹುತೇಕ ವಂಚನೆ ಪ್ರಕರಣಗಳು ‘ಶಕ್ತಿ’ಯಲ್ಲಿ ಪ್ರಕಟಗೊಂಡ ಬೆನ್ನಲ್ಲೇ ದಂಧೆಕೋರರು ಜೈಲು ಪಾಲಾದ ಪ್ರಕರಣ ಹಲವಷ್ಟಿದ್ದರೆ ಇನ್ನೂ ಕೆಲವು ಪ್ರಕರಣಗಳು ಸಿಒಡಿ ತನಿಖಾ ಹಂತದಲ್ಲಿಯೇ ಬಾಕಿಯಾಗಿವೆ. ಇಂತಹ ವಂಚನೆ ಪ್ರಕರಣಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ ವಂಚನೆಗೆ ಶಾಶ್ವತವಾಗಿ ಕಡಿವಾಣ ಹಾಕುವಲ್ಲಿ ಕಾರ್ಯೋನ್ಮುಖ ವಾಗಬೇಕಾಗಿದೆ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.