ಮಡಿಕೇರಿ, ನ. 4: ಮಡಿಕೇರಿ ನಗರ ಸಭೆಯ ಚುನಾಯಿತ ಆಡಳಿತ ಮಂಡಳಿಯ ಅವಧಿ ಮುಗಿದು ಇಪ್ಪತ್ತು ತಿಂಗಳುಗಳಾದರೂ ಚುನಾವಣೆ ನಡೆಸದೇ ಇರುವ ಸ್ಪಷ್ಟ ಕಾರಣ ಕೇಳಿ ಕೊಡಗು ಜಿಲ್ಲಾಧಿಕಾರಿಗಳಾದ ಅನೀಸ್ ಕಣ್ಮಣಿ ಜಾಯ್ ಅವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ನೇತೃತ್ವದಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು .

14-3-2019 ರಂದು ಹಿಂದಿನ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು ಇನ್ನೂ ಚುನಾವಣೆ ನಡೆಸದೇ ಇರುವ ಸ್ಪಷ್ಟ ಕಾರಣವನ್ನು ತಮ್ಮ ಮನವಿಯಲ್ಲಿ ಪ್ರಶ್ನಿಸಿದ್ದಾರೆ .ಸಂವಿಧಾನದ ತಿದ್ದುಪಡಿ 73 ಮತ್ತು 74 ರ ಅನ್ವಯ ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಬೇಕೆಂಬ ನಿಯಮವಿದ್ದರೂ ಯಾವ ಕಾರಣಕ್ಕೆ ಚುನಾವಣೆ ನಡೆಯಲಿಲ್ಲ ಎಂಬುದರ ಬಗ್ಗೆ ಪ್ರಶ್ನಿಸಿದ್ದಾರೆ .ಜನಪ್ರತಿನಿಧಿಗಳಿಲ್ಲದೆ ಮಡಿಕೇರಿ ನಗರದ ಜನತೆ ತಮ್ಮ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯಾಸ ಪಡುತ್ತಿದ್ದು ಅವರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಇರುವ ಅಡೆತಡೆಗಳನ್ನು ಕಾನೂನು ರೀತಿಯಲ್ಲಿ ನಿವಾರಿಸಲು ಮುಂದಾಗಿದೆ ಎಂದು ತೆನ್ನೀರಾ ಮೈನಾ ವಿವರಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತಕ್ಕೂ ಇದರ ಬಗ್ಗೆ ಮಾಹಿತಿ ಬಂದಿಲ್ಲವಾದ್ದರಿಂದ ಕಾಂಗ್ರೆಸ್ ಪಕ್ಷದ ಮನವಿಯನ್ನು ಕೂಡಲೇ ರಾಜ್ಯ ಚುನಾವಣಾ ಆಯೋಗಕ್ಕೆ ರವಾನಿಸಿ ಆದಷ್ಟೂ ಶೀಘ್ರವಾಗಿ ಸ್ಪಷ್ಟೀಕರಣ ನೀಡುವುದಾಗಿ ಭರವಸೆ ನೀಡಿದರು. ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿ ಪ್ರಭುರೈ, ಮಡಿಕೇರಿ ನಗರ ಯುವಕಾಂಗ್ರೆಸ್ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ, ಮಡಿಕೇರಿ ನಗರ ಹಿಂದುಳಿದ ವರ್ಗಗಳ ಅಧ್ಯಕ್ಷ ಜಿ.ಸಿ. ಜಗದೀಶ್ ನಿಯೋಗದಲ್ಲಿ ಪಾಲ್ಗೊಂಡಿದ್ದರು.