ಸುಂಟಿಕೊಪ್ಪ, ನ. 4: ಕೊರೊನಾ ಮಹಾಮಾರಿ ಅಕಾಲಿಕ ಮಳೆ, ಕಾರ್ಮಿಕರ ಸಮಸ್ಯೆಯಿಂದ ಕಾಫಿ ಬೆಳೆಗಾರರು ಹೈರಾಣಾಗಿದ್ದು, ಕೈಗೆ ಬಂದ ಫಸಲನ್ನು ಉಳಿಸಲು ಹರಸಾಹಸ ಪಡುವಂತಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಅಧಿಕವಾಗಿ ಅರೇಬಿಕಾ ಕಾಫಿಯನ್ನು ಬೆಳೆಗಾರರು ಬೆಳೆಸಿದ್ದು, ರೊಬಾಸ್ಟ ಕಾಫಿಗಿಂತ ಅರೇಬಿಕಾ ಉತ್ತಮ ಧಾರಣೆ ಲಭಿಸಿದರೂ, ಅರೇಬಿಕಾದ ಪಾಲನೆ ಪೋಷಣೆಗೆ ಕಾರ್ಮಿಕರ ವೆಚ್ಚ ಎಲ್ಲವೂ ಅಧಿಕವಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಬೆಳೆದಿದ್ದ ಅರೇಬಿಕಾ ಕಾಫಿ ನೆಲಕಚ್ಚಿದೆ. ಅಕ್ಟೋಬರ್‍ನಲ್ಲಿ ಸುರಿದ ಮಳೆ ನವೆಂಬರ್ ತಿಂಗಳಲ್ಲಿ ಸಹ ಬಿಡುತ್ತಿಲ್ಲ. ಅರೇಬಿಕಾ ಕಾಫಿ ಹಣ್ಣಾಗಿ ಮಳೆಯಿಂದ ಗಿಡದಲ್ಲಿ ಒಡೆದು ನೆಲಕ್ಕೆ ಬೀಳುತ್ತಿದೆ. ಕೊಯ್ದು ಒಣಗಿಸಲು ಸರಿಯಾದ ಬಿಸಿಲಿಲ್ಲ, ಗಿಡದಲ್ಲಿ ಬಿಡಲು ಆಗುತ್ತಿಲ್ಲ.

ಕಾಫಿ ಬೆಳೆಗಾರರು ಹವಾಮಾನ ವೈಫಲ್ಯದಿಂದ ಕಂಗಾಲಾಗಿದ್ದು, ದರ ವ್ಯತ್ಯಯ ಖರ್ಚು ವೆಚ್ಚದಿಂದ ಮುಂದಿನ ಸಾಲಿನಲ್ಲಿ ಕಾಫಿ ತೋಟ ನಿರ್ವಹಣೆ ಹೇಗೆ ಎಂಬ ಚಿಂತೆಯಲ್ಲಿ ಮಗ್ನರಾಗಿದ್ದಾರೆ.

ಅಕಾಲಿಕ ಮಳೆಯಿಂದ ರೊಬಾಸ್ಟ ಕಾಫಿ ಕಾಯಿಗಳು ಉದುರುತ್ತಿದೆ. ಅದನ್ನು ಏನು ಮಾಡಲಾಗದ ಪರಿಸ್ಥಿತಿಯಲ್ಲಿ ರೊಬಾಸ್ಟ ಬೆಳೆಗಾರರು ಇದ್ದಾರೆ. ಕೊರೊನಾ ಮಹಾಮಾರಿಯಿಂದ ಎಲ್ಲಾ ಕ್ಷೇತ್ರದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿದೆ. ಭತ್ತ ಬೆಳೆಯುವ ಅನ್ನದಾತರು ಸಹ ದುಬಾರಿ ಖರ್ಚು ತಗಲುತ್ತಿರುವುದರಿಂದ ವಿಮುಖರಾಗಿದ್ದಾರೆ. ಮತ್ತೊಂದೆಡೆ ಕರಿಮೆಣಸು ಬಳ್ಳಿಗಳು ಸೊರಗುತ್ತಿದ್ದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ಆಶ್ರಯದಾತ ತೋಟಗಾರಿಕೆ ಬೆಳೆ ಕಪ್ಪು ಬಂಗಾರ ಖ್ಯಾತಿಯ ಕರಿಮೆಣಸು ಫಸಲು ಕೈಕೊಡುವ ಭೀತಿಗೆ ಬೆಳೆಗಾರರು ಒಳಗಾಗಿದ್ದಾರೆ.

ಕಾರ್ಮಿಕರು ಸಂಕಷ್ಟದಲ್ಲಿ

ಅಕಾಲಿಕ ಮಳೆಯಿಂದ ಇತ್ತೀಚೆಗೆ ತೋಟದಲ್ಲಿ ಕಾರ್ಮಿಕರಿಗೆ ವಾರದಲ್ಲಿ 3 ಕೆಲಸ ಮಾಲೀಕರು ನೀಡುತ್ತಿದ್ದು, ಇದರಿಂದ ಕಾರ್ಮಿಕರು ಅರೆ ಹೊಟ್ಟೆಯಲ್ಲಿ ಜೀವಿಸಬೇಕಾದ ಪರಿಸ್ಥಿತಿ ಕೊರೊನಾದಿಂದ ಬಂದಿದೆ ಎಂದು ನೊಂದು ನುಡಿಯುತ್ತಾರೆ.

ಕೊಡಗು ಮೊದಲಿನಂತೆ ಇಲ್ಲ. 2018ರ ಭೂಕುಸಿತ, ಜಲಪ್ರಳಯದಿಂದ ಎಲ್ಲಾ ವರ್ಗಗಳ ಬದುಕು ಅತಂತ್ರವಾಗಿದ್ದು, ಕಾಫಿ ಬೆಳೆಗಾರರು ಅದರಲ್ಲೂ ನಾವು ಅಕಾಲಿಕ ಮಳೆ, ಕೊರೊನಾ ಅಂಟು ರೋಗದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ. ಸರಕಾರ ರೈತರು, ಬೆಳೆಗಾರರಿಗೆ ಹೆಚ್ಚಿನ ನೆರವು ಒದಗಿಸಬೇಕಾಗಿದೆ ಎಂದು ಉಲುಗುಲಿ ಗ್ರಾಮದ ಸಣ್ಣ ಬೆಳೆಗಾರರಾದ ಓಡಿಯಪ್ಪನ ಗಣೇಶ್ ಹೇಳುತ್ತಾರೆ. -ರಾಜು ರೈ