ಮಡಿಕೇರಿ, ನ. 3 : ಮಂಗಳೂರು ವಿಶ್ವವಿದ್ಯಾನಿಲಯವು ಕೊಡಗು ಜಿಲ್ಲೆ ವಿಭಾಗದ ಪದವಿ ಮೌಲ್ಯಮಾಪನಾ ಕೇಂದ್ರವನ್ನು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಸ್ಥಾಪಿಸಿ ಸೋಮವಾರದಿಂದ ಬಿ.ಎ. ಕಲಾ ವಿಷಯಗಳ ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ನೀಡಿದೆ.
ಕೊಡಗು ಜಿಲ್ಲೆಯಲ್ಲಿ ಪದವಿ ಮೌಲ್ಯಮಾಪನಕ್ಕೆ ಅವಕಾಶವನ್ನು ಕಲ್ಪಿಸುವ ಕುರಿತು ಹಲವಾರು ವರ್ಷಗಳಿಂದ ಮಂಗಳೂರು ವಿ.ವಿಯ ಮುಂದೆ ಬೇಡಿಕೆ ಇದ್ದು, ಈ ಬಾರಿ ಅದು ಸಾಕಾರಗೊಂಡಿರುವುದು ಕೊಡಗಿನ ಕಾಲೇಜುಗಳ ಪ್ರಾದ್ಯಾಪಕರಿಗೆ ತುಂಬಾ ಸಂತಸ ತಂದಿದೆ.
ಕೋವಿಡ್ 19 ಸಂದಿಗ್ದ ಪರಿಸ್ಥಿತಿಯಲ್ಲಿ ಉಪನ್ಯಾಸಕರು ಮಂಗಳೂರಿಗೆ ಹೋಗಿ ಮೌಲ್ಯ ಮಾಪನ ಮಾಡಲು ಅನಾನುಕೂಲ ವಾಗಿದ್ದು, ಇದೀಗ ಕೊಡಗಿನಲ್ಲೇ ಮೌಲ್ಯಮಾಪನ ಕೇಂದ್ರವನ್ನು ತೆರೆಯ ಲಾಗಿರುವುದರಿಂದ ಪ್ರಾದ್ಯಾಪಕರಿಗೆ ತುಂಬಾ ಅನುಕೂಲಕರವಾಗಿದೆ.
ಈ ಬಾರಿ ಕಲಾವಿಭಾಗದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಸುಮಾರು 40 ಮೌಲ್ಯಮಾಪಕರು ಮೌಲ್ಯಮಾಪನಾ ಕಾರ್ಯದಲ್ಲಿ ತೊಡಗಿದ್ದಾರೆ.