ಶಾಸಕ ಕೆ.ಜಿ. ಬೋಪಯ್ಯ
*ಗೋಣಿಕೊಪ್ಪ, ನ. 3: ರೂ. 35 ಲಕ್ಷ ಅನುದಾನದಲ್ಲಿ ಬಿರುನಾಣಿ ಪಶುವೈದ್ಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಮೂಲಕ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ನಾಲ್ಕು ಪಶು ವೈದ್ಯ ಆಸ್ಪತ್ರೆ ಹಾಗೂ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಬಿರುನಾಣಿ, ಶ್ರೀಮಂಗಲ, ಚೆಂಬು ಹಾಗೂ ಮಾಲ್ದಾರೆ ಗ್ರಾಮಗಳಲ್ಲಿ ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ಅತೀ ಶೀಘ್ರದಲ್ಲಿ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಅತಿವೃಷ್ಟಿ ಹಾಗೂ ಕೊರೊನಾ ಸಂಕಷ್ಟದಿಂದ ಸರ್ಕಾರದ ಆರ್ಥಿಕ ಸ್ಥಿತಿ ಏರುಪೇರಾಗಿದೆ. ಹೀಗಾಗಿ ಹೆಚ್ಚಿನ ಅನುದಾನ ತಂದು ಮತ್ತಷ್ಟು ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಕಾಡುತ್ತಿದೆ ಎಂದು ನೋವಿನ ನುಡಿಗಳನ್ನಾಡಿದ ಶಾಸಕರು, ಈ ಬಾರಿ ಹೆಚ್ಚಿನ ಅನುದಾನ ನಿರೀಕ್ಷೆ ಮಾಡುವಂತಿಲ್ಲ ಎಂದರು.
ಪ್ರಸ್ತುತ ವರ್ಷದಲ್ಲಿ ರೂ. 500 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವ ಚಿಂತನೆಯಿತ್ತು. ಆದರೆ ರೂ. 500 ಕೋಟಿ ಬದಲಾಗಿ ಕೇವಲ ರೂ. 100 ಕೋಟಿಯಷ್ಟೇ ಅನುದಾನ ಬಿಡುಗಡೆಯಾಗಿದ್ದು, ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಹೀಗಾಗಿ ಜನತೆ ಈ ವರ್ಷ ಅಭಿವೃದ್ಧಿ ವಿಚಾರವಾಗಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ ಎಂದರು.
ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೆರಾ ಈಶ್ವರ, ಆರ್.ಎಂ.ಸಿ. ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್, ಪ್ರಮುಖರಾದ ಅಣ್ಣಳಾಮಾಡ ರಾಯ್, ಬೊಟ್ಟಂಗಡ ರಾಜು, ಆರ್.ಎಂ.ಸಿ. ಸದಸ್ಯರಾದ ಬೊಳ್ಳಜಿರ ಸುಶೀಲಾ, ತಾಲೂಕು ಪಶು ವೈದ್ಯಾಧಿಕಾರಿ ತಿಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಸಹಾಯಕ ಕಾರ್ಯದರ್ಶಿ ನರಸಿಂಹ, ಗುತ್ತಿಗೆದಾರರು, ಇಂಜಿನಿಯರುಗಳು, ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.