ಕುಶಾಲನಗರ, ನ. 2: ಕುಶಾಲನಗರ ಪ.ಪಂ. ವ್ಯಾಪ್ತಿಯ ಮೈಸೂರು ರಸ್ತೆಯ ಚರಂಡಿಯಲ್ಲಿ ಸಂಗ್ರಹಗೊಂಡಿರುವ ಕಲುಷಿತ ನೀರನ್ನು ಶುದ್ದೀಕರಿಸಲು ಸಧ್ಯದಲ್ಲಿಯೇ ತ್ಯಾಜ್ಯ ಶುದ್ದೀಕರಣ ಘಟಕ ನಿರ್ಮಿಸಲಾಗುವುದು ಎಂದು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ. ಅವರು ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಪ್ರತಿಕ್ರಿಯಿಸಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ವತಿಯಿಂದ ಸುಮಾರು 200 ಮೀ ಉದ್ದದ ಚರಂಡಿ ನಿರ್ಮಾಣಕ್ಕೆ ಕಾಮಗಾರಿ ನಡೆದಿದ್ದು ಅದು ಪೂರ್ಣಗೊಂಡಿಲ್ಲ. ನದಿಗೆ ಕಲುಷಿತ ನೀರು ನೇರವಾಗಿ ಹರಿಸದಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಮೂಲಕ ಪತ್ರ ಬಂದಿದ್ದು ಈ ಹಿನ್ನಲೆಯಲ್ಲಿ ಕಲುಷಿತ ನೀರು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಪಂಚಾಯ್ತಿಯಿಂದ ಕ್ರಮಕೈಗೊಳ್ಳಲಾಗುವುದು. ಮಳೆ ನೀರು ಮಾತ್ರ ಚರಂಡಿಯಲ್ಲಿ ಹರಿಯಬೇಕಾಗಿದ್ದು ವಾಣಿಜ್ಯ ಕಟ್ಟಡಗಳಿಂದ ಹೊರಸೂಸುವ ಕಲುಷಿತ ನೀರಿನ ಹರಿವಿನ ಬಗ್ಗೆ ಹೆದ್ದಾರಿ ರಸ್ತೆ ಬದಿಯ ಕೆಲವು ಹೊಟೇಲ್‍ಗಳಿಗೆ ನೋಟಿಸ್ ನೀಡಿ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘನೆಯಾದಲ್ಲಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಸುಜಯ್‍ಕುಮಾರ್ ತಿಳಿಸಿದ್ದಾರೆ.
ಸದ್ಯಕ್ಕೆ ಕಲುಷಿತ ನೀರನ್ನು ಸಕ್ಕಿಂಗ್ ಮೆಷಿನ್ ಮೂಲಕ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.