ಪಾಲಿಬೆಟ್ಟ, ನ.2 : ಸುಳ್ಳು ಹೇಳಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಪಕ್ಷದಿಂದ ಜನರು ಬೇಸತ್ತು ಜೆಡಿಎಸ್ ಪಕ್ಷದೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಬಿ. ಗಣೇಶ್ ಹೇಳಿದ್ದಾರೆ.
ಅಮ್ಮತ್ತಿ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ಅಪಾರ ಯೋಜನೆಗಳನ್ನು ನೀಡಿದ್ದಾರೆ. ಪ್ರಕೃತಿ ವಿಕೋಪ ಹಾಗೂ ಪ್ರವಾಹ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟು ಬಹುತೇಕ ಮಂದಿಗೆ ಪರಿಹಾರ ನೀಡಿದ್ದಾರೆ. ರೈತರ ಸಾಲಮನ್ನಾ ಸೇರಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಆಡಳಿತ ನಡೆಸಿದ್ದಾರೆ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಅಸಹಾಯಕತೆ ತೋರುತ್ತಿರುವುದರಿಂದ ಕಾಡಾನೆ ಹಾವಳಿ, ರಸ್ತೆಗಳು, ನೀರಿನ ಸಮಸ್ಯೆ, ನಿವೇಶನ ರಹಿತರು, ಸಂತ್ರಸ್ತರು ಸೇರಿದಂತೆ ಸಾಮಾನ್ಯ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಜಿಲ್ಲಾ ಜೆಡಿಎಸ್ ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷೆ ಜಯಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಜ್ ಬೋಪಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷಾ, ಖಜಾಂಚಿ ಡೆನ್ನಿ ಬರೋಸ್ , ಮಡಿಕೇರಿ ತಾಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಉಪಾಧ್ಯಕ್ಷ ಬಾಳೆಕುಟ್ಟಿರಾ ದಿನಿ ಬೋಪಯ್ಯ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಮತೀನ್, ಯುವ ಘಟಕದ ಜಿಲ್ಲಾಧ್ಯಕ್ಷ ಜಾಸೀರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂ.ಎ ರುಬೀನಾ, ಮಹಿಳಾ ಘಟಕ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರು, ಕುಶಾಲನಗರ ಘಟಕದ ಉಪಾಧ್ಯಕ್ಷ ಮಹೇಶ್, ಮಡಿಕೇರಿ ಮಹಿಳ ಘಟಕದ ಅಧ್ಯಕ್ಷೆ ಸುನಂದ, ಸುಂಟಿಕೊಪ್ಪ ನಗರ ಅಧ್ಯಕ್ಷ ಕೌಸಿಕ್, ಎಸ್ಸಿ ಘಟಕದ ಅಧ್ಯಕ್ಷ ರವಿಕುಮಾರ್, ಕುಶಾಲನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ, ಪ್ರಮುಖರಾದ ಯೋಗೀಶ್ ನಾಯ್ಡು ಸೇರಿದಂತೆ ಮತ್ತಿತರರು ಹಾಜರಿದ್ದರು.
-ಪುತ್ತಂ ಪ್ರದೀಪ್