ಮಡಿಕೇರಿ, ನ. 1: ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕೊರೊನಾ ಸೋಂಕಿನ ಆತಂಕದ ನಡುವೆ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಸರಳವಾಗಿ ನೆರವೇರಿತು. ನಿಗದಿತ ಸಮಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಅತಿಥಿ ಗಣ್ಯರು ಆಗಮಿಸುವುದರೊಂದಿಗೆ ಸೀಮಿತ ಜನತೆ ನಡುವೆ ಧ್ವಜಾರೋಹಣ ನೆರವೇರಿತು. ಜಿಲ್ಲಾ ಸಶಸ್ತ್ರದಳ ಇನ್ಸ್‍ಪಕ್ಟರ್ ರಾಚಯ್ಯ ನೇತೃತ್ವದಲ್ಲಿ ಪೊಲೀಸ್ ವಾದ್ಯಕ್ಕೆ ತಕ್ಕಂತೆ ಪುಟ್ಟ ಪಥಸಂಚಲನ ನಡೆಯು ವುದರೊಂದಿಗೆ ಸಚಿವರು ಗೌರವ ರಕ್ಷೆ ಸ್ವೀಕರಿಸಿದರು. ಜಿಲ್ಲಾ ಸಶಸ್ತ್ರದಳ, ಕೊಡಗು ಪೊಲೀಸ್, ಗೃಹರಕ್ಷಕರು ಮತ್ತು ಅರಣ್ಯ ಪೊಲೀಸ್ ತಂಡ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ಸಚಿವ ವಿ. ಸೋಮಣ್ಣ ಅವರಿಂದ ಸಂದೇಶ ಬಳಿಕ ಕೊಡಗಿನ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕ ಅಂಕಗಳನ್ನು ಪಡೆದಿರುವ ಐಗೂರುವಿನ ಕೆ.ಆರ್. ಹರ್ಷಿತಾ, ಹಾಕತ್ತೂರುವಿನ ಪಿ.ಎಸ್. ಕವನ, ಶಿರಂಗಾಲದ ಲಾವಣ್ಯ ಕ್ರಮವಾಗಿ ‘ಲ್ಯಾಪ್‍ಟಾಪ್’ಗಳನ್ನು ಸ್ವೀಕರಿಸಿ ಮೆಚ್ಚುಗೆಗೆ ಪಾತ್ರರಾದರು.

ಕೊಡಗು ಶಿಕ್ಷಕರ ಸಂಘದ ಲಹರಿ ಬಳಗದಿಂದ ನಾಡಗೀತೆ ಹಾಗೂ ರೈತಗೀತೆ ಹಾಡಲಾಯಿತು. ಶಿಕ್ಷಕಿ ಅನಿತಾ ದೇವಯ್ಯ ನಿರೂಪಣೆ ಯೊಂದಿಗೆ ಇಂದಿನ ಕವಾಯತ್ ವೀಕ್ಷಣೆ ಹಾಗೂ ನಿರ್ಗಮನ ಆದೇಶ ಸಹಿತ ಅಧಿಕಾರಿ ರಾಚಯ್ಯ ಸಚಿವರ ಎದುರು ಕನ್ನಡದಲ್ಲೇ ಕೋರಿಕೆ ಸಲ್ಲಿಸಿ ಗಮನ ಸೆಳೆದರು. ಸಚಿವರು ಕೂಡ ಕನ್ನಡದಲ್ಲಿ ಸೂಚಿಸಿ ಕನ್ನಡ ಪ್ರೇಮ ಮೆರೆದರು. ನಿಗದಿತ ಕಾಲಮಿತಿ ಯೊಳಗೆ ಎಲ್ಲವೂ ಅಚ್ಚುಕಟ್ಟಾಗಿ ಸಮಾಪ್ತಿಗೊಂಡಿದ್ದು ಬಾಸÀವಾಯಿತು.

ವಿದ್ಯಾರ್ಥಿನಿಗೆ ನೆರವು

ಸಚಿವ ವಿ. ಸೋಮಣ್ಣ ಅವರ ಪತ್ನಿ ಶೈಲಜಾ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಬಡ ಶೈಕ್ಷಣಿಕ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ನೆರವು ನೀಡುತ್ತಿದ್ದಾರೆ. ವಿ. ಸೋಮಣ್ಣ ಪ್ರತಿಷ್ಠಾನದ ಹೆಸರಿನಲ್ಲಿ ಈ ಸೇವೆ ನಡೆಯುತ್ತಿದ್ದು, ಕೊಡಗಿನ ಹಾಕತ್ತೂರು ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕವನ ಈ ನೆರವಿಗೆ ಆಯ್ಕೆಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೊ ಖಚಿತಪಡಿಸಿದರು. ಇಂದು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪತಿಯೊಂದಿಗೆ ಪಾಲ್ಗೊಂಡಿದ್ದ ಶೈಲಜಾ ಸೋಮಣ್ಣ ಅವರು ಕವನ ಅವರ ಪೋಷಕ ರೊಂದಿಗೆ ಸಮಾಲೋಚಿಸಿ ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೆ ಆರ್ಥಿಕ ನೆರವಿನ ಭರವಸೆ ನೀಡಿದರು.