ಮಡಿಕೇರಿ, ಅ. 31: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಬರುವ ಮಡಿಕೇರಿ ಸನಿಹದ ಪ್ರಸಿದ್ಧ ಪ್ರವಾಸಿ ತಾಣವಾದ ಮಾಂದಲ್‍ಪಟ್ಟಿ ಇದೀಗ ಹಲವು ತಿಂಗಳುಗಳ ಅಂತರದ ಬಳಿಕ ಪ್ರವಾಸಿಗಳಿಗೆ ಮುಕ್ತಗೊಂಡಿದೆ. ಕಳೆದ ಮಾರ್ಚ್ ತಿಂಗಳಿನಿಂದ ಕೋವಿಡ್ ಕಾರಣದಿಂದಾಗಿ ನಿರ್ಬಂಧಿಸಲ್ಪಟ್ಟಿದ್ದ ಈ ಪ್ರದೇಶಕ್ಕೆ ಅ. 31 ರಿಂದ ಅವಕಾಶ ಕಲ್ಪಿಸಲಾಗಿದೆ.ಪ್ರವಾಸಿಗರಿಗೆ ಇಲ್ಲಿನ ಬಾಗಿಲು ತೆರೆಯಲ್ಪಟ್ಟಿದೆಯಾದರೂ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಬರುವ ಈ ಪ್ರಕೃತಿಯ ಮಡಿಲಿಗೆ ತೆರಳಲು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಲೇಬೇಕಿದೆ. ಮಾತ್ರವಲ್ಲದೆ ಅಗತ್ಯ ಸ್ಥಳವಾದ ಟಿಕೆಟ್ ಕೌಂಟರ್ ಮತ್ತಿತರ ಕಡೆಗಳಲ್ಲಿ ಸ್ಯಾನಿಟೈಸರ್ ಬಳಸಲೇಬೇಕಾಗಿದೆ. ಇದರೊಂದಿಗೆ ಪ್ಲಾಸ್ಟಿಕ್ ಬಳಕೆ ವಿಚಾರದಲ್ಲಿ ಮತ್ತಷ್ಟು ಬಿಗಿ ಮಾಡಲಾಗಿದೆ. ನೀರಿನ ಬಾಟಲಿಯಂತಹ ಅಗತ್ಯತೆಗಳನ್ನು ಕೊಂಡೊಯ್ಯಬಹುದಾದರೂ ಇದಕ್ಕೆ ಪ್ರವಾಸಿಗರು ಒಂದಷ್ಟು ಠೇವಣಿ ನೀಡಬೇಕು. ಈ ಬಾಟಲಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಇಲಾಖೆಯ ಸ್ಟಿಕ್ಕರ್ ಅನ್ನು ಅಂಟಿಸಿ ಬಿಡುತ್ತಾರೆ. ಮತ್ತೆ ಇದನ್ನು ತಾಣದಿಂದ ಹಿಂತಿರುಗುವಾಗ ವಾಪಾಸ್ಸು ತಂದು ಕಟ್ಟಿದ ಹಣವನ್ನು ಮರಳಿ ಪಡೆಯಬಹುದಾಗಿದೆ (ಮೈಸೂರು ಮೃಗಾಲಯದ ರೀತಿಯಲ್ಲಿ). ಹಾಳಾಗಿದ್ದ ರಸ್ತೆಯನ್ನು ಒಂದಷ್ಟು ಸರಿಪಡಿಸಲಾಗಿದ್ದು, ಈ ಹಿಂದೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಮೂಲಕ ಪಾಲಿಸಿಕೊಂಡು ಬರಲಾಗುತ್ತಿದ್ದ ನಿಯಮಾನುಸಾರವಾಗಿಯೇ ಎಲ್ಲರೂ ನಡೆದುಕೊಳ್ಳಬೇಕಿದೆ. ಪ್ರವಾಸಿಗರನ್ನು ಕರೆದೊಯ್ಯುವ ಜೀಪ್‍ನವರು ಮಾರ್ಗದ ನಡುವೆ ಎಲ್ಲೂ ನಿಲ್ಲಿಸುವಂತಿಲ್ಲ. ನೇರವಾಗಿ ‘ವ್ಯೂ ಪಾಯಿಂಟ್’ಗೆ

ತೆರಳಿ ಹಿಂತಿರುಗಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ವಾಹನದವರೊಂದಿಗೂ ಇಲಾಖೆ ಸಭೆ ನಡೆಸಿದ್ದು, ಸೂಕ್ತ ನಿರ್ದೇಶನವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

(ಮೊದಲ ಪುಟದಿಂದ) ಈ ಕುರಿತಾಗಿ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಹಿಂದೆ ಮಾಂದಲ್‍ಪಟ್ಟಿಗೆ ತೆರಳಲು ಇದ್ದ ಸಮಸ್ಯೆಗಳನ್ನು ಸಂಬಂಧಿಸಿದವರೊಂದಿಗೆ ಚರ್ಚಿಸಿ ಇತ್ಯರ್ಥ ಮಾಡಲಾಗಿತ್ತು. ಇದರ ಅನ್ವಯ ಪ್ರವಾಸಿಗರು, ವಾಹನ ಚಾಲಕರು ನಡೆದುಕೊಳ್ಳಬೇಕಿದೆ. ಅರಣ್ಯ ಇಲಾಖೆ ಈ ಕುರಿತಾಗಿ ಗಮನಹರಿಸಲಿದೆ ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆಯೂ ಕಾನೂನಿನ ಪ್ರಕಾರ ಗಮನಹರಿಸಲಿರುವುದಾಗಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಅವರು ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಗಿಂತ ಹೆಚ್ಚಾಗಿ ಈ ಸ್ಥಳದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ನೋಡಿಕೊಳ್ಳಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ. ಕಳೆದ ಮಾರ್ಚ್‍ನಿಂದ ನಿಬರ್ಂಧಿಸಲ್ಪಟ್ಟಿದ್ದ ಮಾಂದಲ್‍ಪಟ್ಟಿ ಇದೀಗ ಮುಕ್ತವಾಗಿರುವು ದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಮುಖ ಮಾಡುವ ಸಾಧ್ಯತೆ ಇದೆ.