ಕುಶಾಲನಗರ, ಅ. 31: ಲಯನ್ಸ್ ಕ್ಲಬ್ ವತಿಯಿಂದ ಕುಶಾಲನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಉಚಿತ ಕಣ್ಣು ತಪಾಸಣಾ ಆಸ್ಪತ್ರೆ ನಿರ್ಮಿಸಲು ಪೂರ್ವಸಿದ್ಧತೆಗಳು ನಡೆಯುತ್ತಿವೆ ಎಂದು ಲಯನ್ಸ್ ಜಿಲ್ಲೆ 317ಡಿ ಯ ಮೂರನೇ ವಲಯ ಅಧ್ಯಕ್ಷ ಕೆ.ಎಂ.ಜಗದೀಶ್ ತಿಳಿಸಿದರು.ಅವರು ಕುಶಾಲನಗರ ಲಯನ್ಸ್‍ಗೆ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕುಶಾಲನಗರ ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಯ ಬಗ್ಗೆ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಕ್ರಿಯಾ ಯೋಜನೆ ಸಿದ್ದಪಡಿಸುತ್ತಿದ್ದು ಪ್ರಥಮ ಹಂತದಲ್ಲಿ ಸ್ಥಳೀಯ ಕ್ಲಬ್ ಸದಸ್ಯರು ಸೇರಿದಂತೆ ಇತರ ಕ್ಲಬ್ ಸದಸ್ಯರ ಸಹಯೋಗದೊಂದಿಗೆ ಅಂದಾಜು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ನಂತರ ಅಂದಾಜು 7.5 ಕೋಟಿ ರೂ ವೆಚ್ಚದಲ್ಲಿ ಬೃಹತ್ ಆಸ್ಪತ್ರೆ ನಿರ್ಮಿಸುವ ಬಗ್ಗೆ ಯೋಜನೆ ಸಿದ್ದವಾಗಿದೆ. ಈ ಸಂಬಂಧ ಈಗಾಗಲೇ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರೊಂದಿಗೆ ಚರ್ಚಿಸಲಾಗಿದ್ದು ಮುಂದಿನ ಯೋಜನೆ ಸಿದ್ಧವಾಗಲಿದೆ ಎಂದು ತಿಳಿಸಿದರು. ಲಯನ್ಸ್ ಕ್ಲಬ್ ವತಿಯಿಂದ ಬೆಂಗಳೂರಿನಲ್ಲಿ ಉಚಿತ ಕಣ್ಣಿನ ಆಸ್ಪತ್ರೆ ಇದ್ದು, ಈಗಾಗಲೇ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಜನರಿಗೆ ಉಚಿತ ಚಿಕಿತ್ಸೆ ನೀಡಲು ಶಿಫಾರಸು ಮಾಡಲಾಗುತ್ತಿದೆ ಎಂದು ತಿಳಿಸಿದ ಲಯನ್ಸ್ ಪ್ರಮುಖರಾದ ಪೊನ್ನಚ್ಚನ ಎಂ ಮೋಹನ್, ಎಲ್ಲರ ಸಹಯೋಗ ದೊಂದಿಗೆ ಲಯನ್ಸ್ ಉದ್ದೇಶಿತ ಉಚಿತ ಕಣ್ಣಿನ ಆಸ್ಪತ್ರೆ ಮುಂದಿನ ಸಾಲಿನಲ್ಲಿ ಜನರ ಸೇವೆಗೆ ಲಭ್ಯವಾಗುವ ಬಗ್ಗೆ ಆಶಯ ವ್ಯಕ್ತಪಡಿಸಿದರು. ಈ ಸಂಬಂಧ ಈಗಾಗಲೇ ಸ್ಥಳೀಯ ಲಯನ್ಸ್ ಕ್ಲಬ್ ಸದಸ್ಯರು ತಲಾ ಒಂದು ಲಕ್ಷ ರೂಗಳ ದೇಣಿಗೆ ನೀಡುವ ಬಗ್ಗೆಯೂ ತೀರ್ಮಾನಕೈಗೊಳ್ಳಲಾಗಿದೆ. ಉಳಿದಂತೆ ನೆರೆಯ

(ಮೊದಲ ಪುಟದಿಂದ) ಲಯನ್ಸ್ ಕ್ಲಬ್‍ಗಳು ಸೇರಿದಂತೆ ಅಂತರಾಷ್ಟ್ರೀಯ ಕ್ಲಬ್ ಸಹಯೋಗದೊಂದಿಗೆ ಉತ್ತಮ ಆಸ್ಪತ್ರೆಯೊಂದು ನಿರ್ಮಾಣವಾಗಲಿದೆ ಎಂದರು.

ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ

ಹಿಂದಿನ ಸಾಲಿನ ಅಧ್ಯಕ್ಷ ಕೊಡಗನ ಹರ್ಷ, ವಲಯ ಅಧ್ಯಕ್ಷ ಎಂ.ವಿ.ಶಶಿಕುಮಾರ್, ಕೆ.ಪಿ. ಜಗನ್ನಾಥ್, ಕವಿತಾ ಮೋಹನ್, ಸಲಹೆಗಾರ ಶಾಶ್ವತ್ ಬೋಪಣ್ಣ, ಸುನಿಲ್, ಸುಮನ್, ಪವನ್‍ಕುಮಾರ್ ಮತ್ತಿತರರು ಇದ್ದರು.