ಸೋಮವಾರಪೇಟೆ, ಅ.31: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪುಳಿಗಂಜಿ ಹಾಗೂ ಕಳ್ಳಬಟ್ಟಿಯನ್ನು ಮಡಿಕೇರಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಮಡಿಕೇರಿ ಸಮೀಪದ ಬೆಟ್ಟತ್ತೂರು ಗ್ರಾಮದ ಬಲೆಕಂಡಿ ನಿವಾಸಿ ಕೆ.ಎ. ಸೋಮಯ್ಯ ಎಂಬವರ ಮನೆಯ ಮೇಲೆ ಧಾಳಿ ನಡೆಸಿದ ಅಬಕಾರಿ ಇಲಾಖಾಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 100 ಲೀಟರ್ ಪುಳಿಗಂಜಿ, 18.250 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡು, ಆರೋಪಿ ಸೋಮಯ್ಯನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಲಾಖೆಯ ಉಪ ನಿರೀಕ್ಷಕ ಬಿ.ಎಸ್. ಲೋಕೇಶ್, ಸಿಬ್ಬಂದಿಗಳಾದ ಕೆ.ಎಸ್. ಅಮ್ಜದ್, ಹೆಚ್.ಎ. ರಾಜು ಮತ್ತು ಕೆ.ಪಿ. ಸರಿತ ಪಾಲ್ಗೊಂಡಿದ್ದರು.