ವೀರಾಜಪೇಟೆ, ಅ. 31: ವಿಶ್ವ ಪ್ರಸಿದ್ಧ ಕವಿ ಮಹರ್ಷಿ ವಾಲ್ಮೀಕಿಯ ಮಹಾಕಾವ್ಯ “ವಾಲ್ಮೀಕಿ ರಾಮಾಯಣ” ಶತಮಾನಗಳಿಂದ ಸಮಾಜಕ್ಕೆ ಕೊಡುಗೆಯಾಗಿದ್ದು ಇಂದು ಚಿಂತಕರ ಮೆಚ್ಚುಗೆಗೆ ಪಾತ್ರವಾಗಿದೆ. ವಾಲ್ಮೀಕಿ ಅವರ ಮಹಾಕಾವ್ಯ ಮನುಕುಲಕ್ಕೆ ನೀಡಿದ ಅಮೂಲ್ಯ ರತ್ನ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಹೇಳಿದರು.
ವೀರಾಜಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು ವಾಲ್ಮೀಕಿ ಕವಿವರ್ಯರು, ದಾರ್ಶನಿಕರು ಆಗಿದ್ದು, ಅವರ ಮಹಾಕಾವ್ಯದ ಕೊಡುಗೆ ಇಂದಿಗೂ ಅಮರ ಎಂದರು.
ತಾಲೂಕು ಆಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್, ಡಿ.ವೈಎಸ್‍ಪಿ ಸಿ.ಟಿ.ಜಯಕುಮಾರ್ ತಾಲೂಕು ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಮೊದಲು ಅತಿಥಿಗಳು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತಾಲೂಕು ವಾಲ್ಮೀಕಿ ಸಮಾಜದ ಪ್ರಮುಖರು ಹಾಜರಿದ್ದರು.