ಕುಶಾಲನಗರ, ಅ. 30: ಅಖಿಲ ಭಾರತ ವೀರಶೈವ ಮಹಾಸಭಾದ ಎಲ್ಲಾ ಘಟಕಗಳಿಗೆ ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕೊಡಗು ಜಿಲ್ಲಾ ಚುನಾವಣಾಧಿಕಾರಿ ಹೆಚ್.ಎಂ. ರೇಣುಕ ಪ್ರಸನ್ನ ತಿಳಿಸಿದರು.

ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದುವರೆಗೆ ರಾಜ್ಯದ 12 ಜಿಲ್ಲೆಗಳಿಗೆ ಮತ್ತು 106 ತಾಲೂಕುಗಳಿಗೆ ಚುನಾವಣೆ ನಡೆದಿದೆ. ಬಾಕಿ ಉಳಿದ ಅರ್ಹತೆ ಪಡೆದಿರುವ ಜಿಲ್ಲೆ ಮತ್ತು ತಾಲೂಕುಗಳ ಚುನಾವಣೆ ಡಿ. 27 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಚುನಾವಣಾ ವೇಳಾಪಟ್ಟಿಯಂತೆ ಡಿಸೆಂಬರ್ ತಿಂಗಳ 9ನೇ ತಾರೀಖಿನಿಂದ 15ನೇ ತಾರೀಖಿನವರಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಡಿ. 16 ರಂದು ನಾಮಪಾತ್ರಗಳನ್ನು ಪರಿಶೀಲಿಸಲಾಗುವುದು. ನಾಮಪತ್ರ ಹಿಂಪಡೆಯಲು 19ನೇ ತಾರೀಖಿನವರಗೆ ಅವಕಾಶವಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಕಾರ್ಯದರ್ಶಿ ಶಾಂಭ ಶಿವಮೂರ್ತಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪಿ. ಮಹದೇವಪ್ಪ ಮತ್ತು ಜಿಲ್ಲಾ ನಿರ್ದೇಶಕ ಮಧುಸೂದನ್ ಹಾಜರಿದ್ದರು.