ಕೂಡಿಗೆ, ಅ.28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಮತ್ತು ಮದಲಾಪುರ ಗ್ರಾಮಗಳಲ್ಲಿ ಕಾಡಾನೆಗಳ ಹಾವಾಳಿ ಹೆಚ್ಚಾಗಿ ಈ ಭಾಗದ ಅನೇಕ ರೈತರ ಭತ್ತದ ನಾಟಿಗಳನ್ನು ತಿಂದು ತುಳಿದು ಬಾರಿ ನಷ್ಟಪಡಿಸಿವೆ.

ಹುದುಗೂರು ಗ್ರಾಮದ ಪ್ರಕಾಶ್, ಕಾಳೇಗೌಡ, ಕೃಷ್ಣ, ರಾಜಣ್ಣ, ಕುಮಾರ, ಸುಶೀಲಮ್ಮ ಎಂಬವರ ಜಮೀನುಗಳಿಗೆ ಬೆಂಡೆಬೆಟ್ಟದಿಂದ ಬಂದಿರುವ ಕಾಡಾನೆಗಳು ಸೋಲಾರ್ ತಂತಿಗಳನ್ನು ತುಂಡು ಮಾಡಿ ಹಾರಂಗಿ ನದಿ ಅಂಚಿನ ಪ್ರದೇಶದ ಭತ್ತದ ಗದ್ದೆಗಳನ್ನು ನಷ್ಟ ಪಡಿಸಿವೆ.

ಹಾರಂಗಿ ನದಿಯನ್ನು ದಾಟಿಕೊಂಡು ಬಂದಿರುವ ಕಾಡಾನೆಗಳು ಎರಡು ಗುಂಪುಗಳಾಗಿ ಮರಿ ಆನೆ ಸೇರಿದಂತೆ ಐದು ಆನೆಗಳು ಮದಲಾಪುರ ಗ್ರಾಮದ ಕೃಷ್ಣಪ್ಪ, ಲೋಕೇಶ್ ಜವರಣ್ಣ ಎಂಬವರ ಜಮೀನಿಗೆ ದಾಳಿ ಮಾಡಿ ಜೋಳ ಮತ್ತು ಬಾಳೆ, ಸಿಹಿ ಗೆಣಸು ಬೆಳೆಯನ್ನು ನಾಶಪಡಿಸಿದೆ. ಸಂಬಂಧಿಸಿದ ಅರಣ್ಯ ಇಲಾಖೆ ಹಾರಂಗಿ ನದಿಯನ್ನು ದಾಟಿಸಿ ಬೆಂಡೆಬೆಟ್ಟದ ಮೂಲಕವಾಗಿ ಆನೆಗಳನ್ನು ಓಡಿಸುವಂತೆ ಮನವಿ ಮಾಡಿದ್ದಾರೆ.