ಮಡಿಕೇರಿ, ಅ. 28: ನಗರದ ಪೊಲೀಸ್ ಮೈತ್ರಿ ಭವನ ಬಳಿ ಇಲಾಖೆಯ ವಸತಿಗೃಹಗಳಿಗೆ ಹೊಂದಿಕೊಂಡಂತೆ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಒಳಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿ ಸಾಗಿದ್ದು, ತಾಂತ್ರಿಕ ಸಲಹೆಯೊಂದಿಗೆ ಕಾಮಗಾರಿಯ ಗುಣಮಟ್ಟ ಗಮನಿಸುವವರಿಲ್ಲ ಎಂದು ಅಲ್ಲಿನ ನಾಗರಿಕರು ಆರೋಪಿಸಿದ್ದಾರೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಬೇಸರ ವ್ಯಕ್ತಪಡಿಸಿರುವ ನಿವಾಸಿಗಳು ಪ್ರಸಕ್ತ ಕಾಮಗಾರಿಯಲ್ಲಿ ಜನವಸತಿಯ ಯಾವದೇ ಮನೆಗಳಿಗೆ ತೆರಳಲು ತೊಂದರೆ ನಡುವೆ, ಬಹುತೇಕ ಕೆಸರುಮಯ ವಾತಾವರಣ ಇರುವದಾಗಿ ವಿವರಿಸಿದ್ದಾರೆ. ಪೊಲೀಸ್ ವಸತಿ ಬಳಿ ಮಕ್ಕಳು ಮತ್ತು ಹಿರಿಯರ ವಿಹಾರಕ್ಕಾಗಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರಿಂದ ರೂ. 30 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ (ಮೊದಲ ಪುಟದಿಂದ) ಉದ್ಯಾನದೆಡೆಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ಒಂದೇ ಕಡೆ ಎರಡೆರೆಡು ಚರಂಡಿ ನಿರ್ಮಿಸಿ ರಸ್ತೆಯೂ ಹಾಳಾಗಿದೆ ಎಂದು ಬೊಟ್ಟು ಮಾಡಿದ್ದಾರೆ.
ಮೇಲ್ನೋಟಕ್ಕೆ ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಮಂಡಳಿ ಹೆಸರಿನಲ್ಲಿ ಕಾಮಗಾರಿ ನಡೆಯುತ್ತಿದ್ದರೂ; ಇಲ್ಲಿ ನಿರ್ದಿಷ್ಟವಾಗಿ ಕೆಲಸದ ಉಸ್ತುವಾರಿ ಹೊಂದಿರುವ ಇಂಜಿನಿಯರ್‍ಗಳು ಅಥವಾ ತಾಂತ್ರಿಕ ಮಂದಿ ಗೋಚರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ವಸತಿಗೃಹದ ಮಂದಿ, ನಗರಸಭೆಯು ಅವೈಜ್ಞಾನಿಕವಾಗಿ ಬೆಟ್ಟ ಸಾಲಿನಲ್ಲಿ ಕಸ ಸುರಿಯುವ ಪರಿಣಾಮ ನೊಣಗಳ ಬಾಧೆಯೊಂದಿಗೆ ಕಾಯಿಲೆಯ ಆತಂಕ ಎದುರಿಸುತ್ತಿದ್ದಾರೆ; ಪ್ರಸಕ್ತ ಕಾಮಗಾರಿಯಿಂದ ಮತ್ತಷ್ಟು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಕೋಟಿ ಕೋಟಿ ಹಣ ವ್ಯಯಿಸಿ ರೂಪಿಸುತ್ತಿರುವ ಕಾಮಗಾರಿ ಕಳಪೆ ಆಗದಂತೆ ಮತ್ತು ಜನೋಪಕಾರಿ ರೀತಿಯಲ್ಲಿ ಕೈಗೊಳ್ಳುವಂತೆ ಕ್ರಮ ವಹಿಸಬೇಕೆಂದು ‘ಶಕ್ತಿ’ ಮುಖಾಂತರ ಒತ್ತಾಯಿಸಿದ್ದಾರೆ.