(ಅನಿಲ್ ಎಚ್.ಟಿ. , ಪ್ರಜ್ವಲ್ ಜಿ.ಆರ್.)
ಮಡಿಕೇರಿ, ಅ. 28: ಮತ್ತಿಗೋಡು ಆನೆ ಕ್ಯಾಂಪ್ - ನಾಡದೇವಿಯನ್ನೇ ತಾನು ಹೊತ್ತಿದ್ದೆ ಎಂಬ ಗರ್ವ ಲವಲೇಶವೂ ಅವನಲ್ಲಿ ಕಾಣಲಿಲ್ಲ. ತಾನು ಲಕ್ಷಾಂತರ ಮಂದಿಯಿಂದ ಪ್ರಶಂಸೆಗೆ ಒಳಪಟ್ಟೆ ಎಂಬ ಅಹಂ ಅನ್ನೂ ಅವನು ತೋರ್ಪಡಿಸಲಿಲ್ಲ. 21 ವರ್ಷಗಳಿಂದ ನಾಡಹಬ್ಬದಲ್ಲಿ ಪಾಲ್ಗೊಂಡು ಇದೇ ಮೊದಲ ಬಾರಿಗೆ ಪಟ್ಟದಾನೆಯಾದೆ ಎಂಬ ಜಂಭವೂ ಕಂಡುಬಾರಲಿಲ್ಲ.
750 ಕೆ.ಜಿ. ತೂಕದ ಸ್ವರ್ಣದ ಅಂಬಾರಿಯನ್ನು ಹೊರುವ ಮೂಲಕ ರಾಜಮನೆತನದ ಪ್ರತಿಷ್ಠೆಯನ್ನು ಉಳಿಸಿದೆ ಎಂಬ ಧಿಮಾಕು ಅವನಲ್ಲಿರಲಿಲ್ಲ. ಬದಲಿಗೆ, ತನ್ನ ಮೂಲ ಶಿಬಿರಕ್ಕೆ ಸರ್ಕಾರಿ ಲಾರಿಯಲ್ಲಿ ಬಂದು ಇಳಿದಾಗ ಅವನಲ್ಲಿ ಕಂಡುಬಂದದ್ದು ನಿರ್ವಿಕಾರ ಭಾವ.. ನಾನೂ ಎಲ್ಲರಲ್ಲಿ ಒಬ್ಬನಂತೆ ಎಂಬ ನಿರ್ಭಾವುಕತೆ!.
ಇವನು ಅಭಿಮನ್ಯು .. ನಾಡಹಬ್ಬ ದಸರಾದಲ್ಲಿ ಎಲ್ಲರ ಮನಸೆಳೆಯುವ ರೀತಿಯಲ್ಲಿ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಶ್ರೀಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತು ಸಾಗಿ ಮುಖ್ಯಮಂತ್ರಿಯಾದಿಯಾಗಿ ಗಣ್ಯರಿಂದ ಶ್ಲಾಘನೆಗೆ ಪಾತ್ರನಾದ ಕೊಡಗಿನ ಹೆಮ್ಮೆಯ ಅಭಿಮನ್ಯು ದಸರಾ ಸಂಭ್ರಮ ಮುಗಿಸಿ ಮತ್ತಿಗೋಡಿಗೆ ಮರಳಿದ್ದಾನೆ.
ಮೈಸೂರಿನ ಅರಮನೆಯಲ್ಲಿ ಅಧಿಕಾರಿಗಳಿಂದ ಬುಧವಾರ ಬೆಳಗ್ಗೆ 10 ಗಂಟೆಗೆ ಬೀಳ್ಕೊಡುಗೆ ಸ್ವೀಕರಿಸಿದ ತರುವಾಯ ಅರಣ್ಯ ಇಲಾಖೆಯ ಲಾರಿ ಹತ್ತಿ ತಿತಿಮತಿ ಬಳಿಯ ಮತ್ತಿಗೋಡಿನಲ್ಲಿರುವ ಸಾಕಾನೆ ಶಿಬಿರಕ್ಕೆ ಮಧ್ಯಾಹ್ನ 1.45 ಕ್ಕೆ ಅಭಿಮನ್ಯು ತಲುಪಿದ.
ಮತ್ತಿಗೋಡು ಶಿಬಿರಕ್ಕೆ ಮರಳಿದ ದಿಗ್ಗಜನನ್ನು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಅಧಿಕಾರಿ ಸತೀಶ್ ಮತ್ತು ಸಿಬ್ಬಂದಿಗಳು ಭಾವಪೂರ್ಣವಾಗಿ ಸ್ವಾಗತಿಸಿದರು. ಮತ್ತಿಗೋಡಿನಿಂದ 25 ದಿನಗಳ ಮೊದಲು ಮೈಸೂರಿಗೆ ತೆರಳುವಾಗ ಕೇವಲ ಆನೆಯಾಗಿದ್ದ ಅಭಿಮನ್ಯು ರಾಜ್ಯದ ಪ್ರತಿಷ್ಠೆಯ ಪಟ್ಟದಾನೆಯಾಗಿ ಮರಳಿಬಂದ.
ಅಂಬಾರಿ ಹೊರುವ ಮೊದಲ ಅವಕಾಶದಲ್ಲಿಯೇ ಯಾವುದೇ ಸಮಸ್ಯೆಯಿಲ್ಲದೇ ಅತ್ಯಂತ ಯಶಸ್ವಿ ಪಾತ್ರ ನಿರ್ವಹಿಸಿದ ಅಭಿಮನ್ಯುವಿಗೆ ಈ ಅವಕಾಶ ಮೊದಲೇ ಸಿಕ್ಕಬೇಕಿತ್ತು. ಎಲ್ಲದಕ್ಕೂ ಕಾಲ ಕೂಡಿಬರಬೇಕೆಂದು ಹೇಳುವುದು ಇದಕ್ಕೆ ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಕ್ಸಾಂಡರ್ ಶ್ಲಾಘಿಸಿದ್ದಾರೆ.
ಇದೀಗ ಮತ್ತಿಗೋಡಿಗೆ ಮರಳಿ ಬಂದಿರುವ ಅಭಿಮನ್ಯು ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಳಜಿಯಿರುತ್ತದೆ. ಕಾಡಿನ ಪಹರೆಯ ಕಾಯಕದೊಂದಿಗೆ ಅಗತ್ಯಬಿದ್ದಲ್ಲಿ ಮಾತ್ರ ಕಾಡಾನೆ ಸೆರೆ ಕಾರ್ಯಾಚರಣೆಯಂಥ ಸಾಹಸಮಯ ಕೆಲಸಕ್ಕೆ ಈತನನ್ನು ಕಳುಹಿಸಲಾಗುತ್ತದೆ.
ದುಬಾರೆ ಸಾಕಾನೆ ಶಿಬಿರದ ಗೋಪಿ, ಕಾವೇರಿ, ಆನೆಕಾಡು ಶಿಬಿರದ ವಿಕ್ರಂ ಮತ್ತು ವಿಜಯ ಆನೆಗಳೂ ಸ್ವಸ್ಥಾನಕ್ಕೆ ಮರಳಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್ ಮಾಹಿತಿ ನೀಡಿದ್ದಾರೆ.