ಕಣಿವೆ, ಅ. 28 : ಹೆಸರೇ ಹೇಳುವಂತೆ ಹೊನ್ನು ಅಥವಾ ಚಿನ್ನದಂತಹ ಬೆಳೆ ಬೆಳೆವಂತ ಅಪ್ಪಟ ಬಂಗಾರದಂತಹ ಫಲವತ್ತಾದ ಮಣ್ಣನ್ನು ಹೊಂದಿರುವ ಚಿನ್ನೇನಹಳ್ಳಿ ಗ್ರಾಮದ ರೈತರು ನರಕದ ಜೀವನದಲ್ಲಿ ದಿನಗಳೆಯುತ್ತಿದ್ದಾರೆ. ಕುಶಾಲನಗರದ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಾಡಂಚಿನ ಪ್ರದೇಶವಾದ ಈ ಚಿನ್ನೇನಹಳ್ಳಿ ಗ್ರಾಮದಲ್ಲಿ ಬಹುಪಾಲು ರೈತರು ಹೆಬ್ಬಾಲೆ ಗ್ರಾಮದವರೇ ಆಗಿದ್ದಾರೆ. ಈ ರೈತರು ಹೆಚ್ಚಾಗಿ ಬೆಳೆಯುವ ಮುಸುಕಿನ ಜೋಳ ಮತ್ತು ಮರಗೆಣಸು ಬೆಳೆಗಳನ್ನು ಕಾಡಾನೆಗಳು ಬಂದು ತಿಂದು ತುಳಿದು ಧ್ವಂಸ ಮಾಡುತ್ತಿರುವುದಾಗಿ ಅಲ್ಲಿನ ರೈತರು ದೂರುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದಲೂ ಈ ರೈತರು ಬೆಳೆಯುವ ಯಾವುದೇ ಫಸಲನ್ನು ಕಾಡಿನೊಳಗೆ ಆಹಾರ ಸಿಗದೇ ಹಸಿವಿನಿಂದ ಕಂಗೆಟ್ಟಿರುವಂತಹ ಕಾಡಾನೆಗಳು ರಾತ್ರಿ ಆಯಿತೆಂದರೆ ಸಾಕು ಯಾವುದೇ ಭಯ ಅಥವಾ ಆತಂಕವಿಲ್ಲದೇ ಗುಂಪು ಗುಂಪಾಗಿ ಧಾವಿಸಿ ಬಂದು ಫಸಲನ್ನೆಲ್ಲಾ ತಿಂದು ನಾಶಗೈಯುತ್ತಿವೆ. ಚಿನ್ನೇನಹಳ್ಳಿ ಗ್ರಾಮದ ಗಣೇಶ ಮತ್ತು ಜ್ಯೋತಿ ಎಂಬ ಕೃಷಿಕ ದಂಪತಿಗಳು ಎರಡು ಎಕರೆ ಭೂಮಿಯಲ್ಲಿ ತಾವು ಬೆಳೆದಿದ್ದ ಜೋಳದ ಫಸಲನ್ನು ಕಟಾವು ಮಾಡಿ ಜಮೀನಿನಲ್ಲಿ ಸಂಗ್ರಹ ಮಾಡಿ ಇಟ್ಟಿದ್ದರು. ಏಕೆಂದರೆ ಜಮೀನಿನಿಂದ ಮನೆ ಬಾಗಿಲಿಗೆ ಆ ಫಸಲನ್ನು ತಂದು ಹಲ್ಲಿಂಗ್ ಮಾಡಲು ಮಳೆ ಬಂದ ಕಾರಣ ಟ್ರಾಕ್ಟರ್ ಬರುವ ದಾರಿ ಸರಿ ಇಲ್ಲದೇ ಮುಚ್ಚಿಟ್ಟಿದ್ದರು. ಆದರೆ ಏಕಾಏಕೀ ದಾಳಿಯಿಟ್ಟ ಗುಂಪು ಆನೆಗಳ ಹಿಂಡು ಚೀಲಗಳಲ್ಲಿ ತುಂಬಿಸಿಟ್ಟಿದ್ದ ಜೋಳವನ್ನು ಎಳೆದಾಡಿ ತಿಂದು ಹಾನಿಮಾಡಿವೆ. ಇದರಿಂದ ಈ ಬಡ ರೈತರಿಗೆ ಸುಮಾರು 30 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಹಾಗೆಯೇ ಸುನೀತಾ ಎಂಬ ರೈತ ಮಹಿಳೆ ಎರಡು ಬ್ಯಾಗ್ ಬಿತ್ತನೆ ಬೀಜ ತಂದು ಬೆಳೆದಿದ್ದ ಎಲ್ಲಾ ಫಸಲನ್ನು ಕಾಡಾನೆಗಳು ತಿಂದು ಹಾಕಿವೆ. ಹಾಗೆಯೇ ಗ್ರಾಮದ ಜವರಾಯಿ, ಚಂದ್ರು, ನೆಹರು ಮೊದಲಾದವರು ಬೆಳೆದಿದ್ದ ಜೋಳದ ಫಸಲನ್ನು ತಿಂದು ಕಾಡಾನೆಗಳು ಹಾನಿಗೈದಿವೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ತೆರಳಿ ಕಾಡಾನೆಗಳಿಂದ ಹಾನಿಗೊಳ ಗಾದ ರೈತರ ಫಸಲನ್ನು ಪರಿಶೀಲಿಸಿ ಇಲಾಖೆಯಿಂದ ನೀಡುವ ಬೆಳೆ ಪರಿಹಾರವನ್ನು ಪ್ರಾಮಾಣಿಕವಾಗಿ ಒದಗಿಸಲು ಮುಂದಾಗಬೇಕಿದೆ.
ಕಾಡಾನೆಗಳು ಹೆಚ್ಚು ಸಂಚರಿಸುವ ಗ್ರಾಮ ವ್ಯಾಪ್ತಿಯಲ್ಲಿ ಕಂದಕಗಳನ್ನು ಅಳವಡಿಸಲು ಅಥವಾ ಸೋಲಾರ್ ಬೇಲಿ ನಿರ್ಮಿಸಲು ಮುಂದಾಗಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.