ಗೋಣಿಕೊಪ್ಪಲು, ಅ.28: ವೀರಾಜಪೇಟೆ ಪೊಲೀಸ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಣೆಯಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಯು ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಅಧಿಕಾರಿಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಶ್ಲಾಘನೆ ವ್ಯಕ್ತಪಡಿಸಿದರು.
ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜನೆಗೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಚಾಮರಾಜ ನಗರಕ್ಕೆ ವರ್ಗಾವಣೆಗೊಂಡಿರುವ ಸುರೇಶ್ ಬೋಪಣ್ಣ ಅವರು ಗೋಣಿಕೊಪ್ಪ ಠಾಣೆಯನ್ನು ಮೊದಲ ಸ್ಥಾನಕ್ಕ್ಲೆ ತರಲು ಶ್ರಮಿಸಿದ್ದಾರೆ. ಇವರ ಶ್ರಮವನ್ನು ಮುಂದಿನ ಅಧಿಕಾರಿಗಳು ಚಾಚೂ ತಪ್ಪದೆ ಮುಂದುವರಿಸಿಕೊಂಡು ಹೋಗುವಂತಾಗಬೇಕು ಎಂದರು.
ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಮಾತನಾಡಿ ಇಲಾಖೆಯಲ್ಲಿ ಸದಾ ಒತ್ತಡದ ನಡುವೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ಸಂದರ್ಭ ತಾಳ್ಮೆ ಕಳೆದುಕೊಳ್ಳದೆ ಕೆಲಸ ನಿರ್ವಹಿಸಬೇಕು. ಹಾಗದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ನೂತನವಾಗಿ ಆಗಮಿಸಿದ ಠಾಣಾಧಿಕಾರಿ ಹೆಚ್.ಸುಬ್ಬಯ್ಯ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗಳು ಸಹಜ. ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಸುರೇಶ್ ಬೋಪಣ್ಣ ಇಲಾಖೆಯಲ್ಲಿ ಸಿಕ್ಕಿದ ಅವಕಾಶವನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳುವುದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಇಲಾಖೆಯಲ್ಲಿ ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಸಿಬ್ಬಂದಿಗೆ ಕಿವಿ ಮಾತು ಹೇಳಿದರು.
ಅಪರಾಧ ವಿಭಾಗದ ಠಾಣಾಧಿಕಾರಿ ಮಂಚಯ್ಯ, ಎಎಸ್‍ಐಗಳಾದ ನಂಜಪ್ಪ, ಮೇದಪ್ಪ, ಗಣಪತಿ, ಸುಬ್ರಮಣಿ ಸೇರಿದಂತೆ ಮಡಿಕೇರಿ ಭ್ರಷ್ಟಾಚಾರ ನಿಗ್ರಹ ದಳದ ವೃತ್ತ ನಿರೀಕ್ಷಕರಾದ ಶ್ರೀಧರ್ ಉಪಸ್ಥಿತರಿದ್ದರು. ಠಾಣೆಯ ಸಿಬ್ಬಂದಿ ಪೂವಣ್ಣ ಸ್ವಾಗತಿಸಿದರು. ಸಿಬ್ಬಂದಿ ಶೋಭಾ ಪ್ರಾರ್ಥಿಸಿ ಠಾಣಾಧಿಕಾರಿ ಹೆಚ್.ಸುಬ್ಬಯ್ಯ ವಂದಿಸಿದರು.