ಸೋಮವಾರಪೇಟೆ, ಅ. 27: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಹುತೇಕ ಅವಧಿಯಲ್ಲಿ ಅಧಿಕಾರ ಉಳಿಸಿಕೊಂಡಿದ್ದ ಬಿಜೆಪಿಗೆ ಈ ಬಾರಿ ಟಾಂಗ್ ಕೊಟ್ಟು, ಅಧಿಕಾರ ಸ್ಥಾಪಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಆಪರೇಷನ್ ಹಸ್ತ ಯಶಸ್ವಿಯಾದರೆ ಅಧಿಕಾರ ‘ಕೈ’ವಶವಾಗಲಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಈ ವರ್ಗಕ್ಕೆ ಸೇರಿದ ಯಾವೊಬ್ಬ ಅಭ್ಯರ್ಥಿಯೂ ಇಲ್ಲದಿರುವದರಿಂದ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿತ್ತು.
ಇದರ ಪರಿಣಾಮ ತಾ. 20ರಂದು ನಡೆಯಬೇಕಿದ್ದ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆ ನೀಡಿತ್ತು. ನಂತರ ಅರ್ಜಿಯ ವಿಚಾರಣೆ ನಡೆಸಿ ಹಿಂದಿನ ಮೀಸಲಾತಿಯಡಿ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಿತ್ತು.
ಇದರನ್ವಯ ಸೋಮವಾರಪೇಟೆ ಪ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ನವೆಂಬರ್ 3ರಂದು ಅಪರಾಹ್ನ 3 ಗಂಟೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಪ.ಪಂ.ನಲ್ಲಿ ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ 3 ಹಾಗೂ ಪಕ್ಷೇತರ ಸದಸ್ಯರೋರ್ವರು ಜಯಗಳಿಸಿದ್ದು, ಮೀಸಲಾತಿ ಬಿಜೆಪಿಯ ಪರ ಬಂದಿದೆ.
ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಈರ್ವರು ಸದಸ್ಯರಿದ್ದು, ಇಬ್ಬರಿಗೂ ಅಧ್ಯಕ್ಷ ಸ್ಥಾನದ ಅರ್ಹತೆ ಇದೆ. ಇದರಲ್ಲಿ ಪಿ.ಕೆ. ಚಂದ್ರು ಮತ್ತು ನಳಿನಿ ಗಣೇಶ್ ಈರ್ವರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಬಹುತೇಕ ಮಂದಿ ಪಿ.ಕೆ. ಚಂದ್ರು ಅವರು ಅಧ್ಯಕ್ಷರಾಗಬೇಕೆಂದು ಒಲವು ತೋರಿದರೆ, ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಪ್ರಥಮ ಅವಧಿಯಲ್ಲಿ ನಳಿನಿ ಗಣೇಶ್, ಎರಡನೇ ಅವಧಿಯಲ್ಲಿ ಪಿ.ಕೆ.ಚಂದ್ರು ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಪಿ.ಕೆ. ಚಂದ್ರು ಅವರು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದು, ಇದೇ ಪ್ರಥಮ ಬಾರಿಗೆ ಪ.ಪಂ. ಪ್ರವೇಶಿಸಿದ್ದಾರೆ. ಈಗಾಗಲೇ ಪಕ್ಷದ ಹಾಗೂ ಸಂಘದ ಪ್ರಮುಖ ನಾಯಕರನ್ನು ಪಿ.ಕೆ. ಚಂದ್ರು ಸಂಪರ್ಕಿಸಿದ್ದು, ಪ್ರಥಮ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ನಳಿನಿ ಗಣೇಶ್ ಅವರು ಈ ಬಾರಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರೆ, ಪಿ.ಕೆ. ಚಂದ್ರು ಅವರು ಪರಿಶಿಷ್ಟ ಜಾತಿ ಮೀಸಲಾತಿಯಡಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಬಿಜೆಪಿಯಲ್ಲಿರುವ ಇಬ್ಬರು ಸದಸ್ಯರೂ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವದರಿಂದ ರಾಜಕೀಯ ತಂತ್ರಗಾರಿಕೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಒಂದು ವೇಳೆ ಪಿ.ಕೆ. ಚಂದ್ರು ಅವರಿಗೆ ಪ್ರಥಮ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಿಗದಿದ್ದರೆ ಕಾಂಗ್ರೆಸ್‍ನತ್ತ ಸೆಳೆಯಲು ಈಗಾಗಲೇ ಪಕ್ಷದ ರಾಜ್ಯ ಮಟ್ಟದ ಮುಖಂಡರೋರ್ವರು ಮುಂದಾಗಿದ್ದಾರೆ. ಕಾಂಗ್ರೆಸ್‍ನಲ್ಲಿ ಈಗಾಗಲೇ 4 ಮಂದಿ ಸದಸ್ಯರಿದ್ದು, ಜೆಡಿಎಸ್‍ನವರೊಂದಿಗೆ ಮಾತುಕತೆ ನಡೆಸಿ ಪ್ರಥಮ ಅವಧಿಯಲ್ಲಿ ನಿಮಗೆ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರೆ ಜಿಲ್ಲಾ ಮಟ್ಟದ ಘಟಕದಲ್ಲಿ ಪ್ರಾತಿನಿಧ್ಯ ಸೇರಿದಂತೆ ಇನ್ನಿತರ ‘ವೈಯುಕ್ತಿಕ ಆಫರ್’ ಸಹ ನೀಡಿದ್ದು, ಆಪರೇಷನ್ ಹಸ್ತಕ್ಕೆ ಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಇರುವ ಮೂರು ಸದಸ್ಯರ ಪೈಕಿ ಈರ್ವರು ಕಾಂಗ್ರೆಸ್ ಬೆಂಬಲಿಸಿದರೆ ಪಕ್ಷದ ವಿಪ್ ಸಹ ಅನ್ವಯವಾಗುವದಿಲ್ಲ. ಪ್ರಥಮ ಅವಧಿಯಲ್ಲಿ ನಮ್ಮ ಬೆಂಬಲದಿಂದ ನೀವೇ ಅಧ್ಯಕ್ಷರಾಗಬಹುದು ಎಂದು ‘ರಾಜಕೀಯ ತಿಳುವಳಿಕೆ’ ನೀಡಿದ್ದಾರೆ ಎನ್ನಲಾಗಿದೆ.
ಈ ಆಫರ್ ಬಗ್ಗೆ ‘ಶಕ್ತಿ’ಗೆ ಹೆಚ್ಚಿನ ಮಾಹಿತಿ ನೀಡಲು ಪಿ.ಕೆ. ಚಂದ್ರು ನಿರಾಕರಿಸಿದ್ದಾರೆ. ಬಿಜೆಪಿಯಲ್ಲೇ ಅಧ್ಯಕ್ಷ ಸ್ಥಾನ ನೀಡುತ್ತಾರೆ. ಶಾಸಕರ ಮಾರ್ಗದರ್ಶನದಲ್ಲಿ ಮುಂದುವರೆಯುವದಾಗಿ ಕಾಂಗ್ರೆಸ್‍ನ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೂ ಪಟ್ಟು ಬಿಡದ ಕಾಂಗ್ರೆಸ್‍ನ ನಾಯಕರು ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು-ನಿಮ್ಮ ಮನಸ್ಸು ಬದಲಾದರೆ ತಕ್ಷಣ ಸಂಪರ್ಕಿಸಿ. ಮುಂದಿನದನ್ನು ನೋಡಿಕೊಳ್ಳೋಣ ಎಂದು ಆಪರೇಷನ್ ಹಸ್ತದ ಬಾಗಿಲನ್ನು ತೆರೆದಿಟ್ಟಿದ್ದಾರೆ.
ನವೆಂಬರ್ 3 ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಪಟ್ಟಣ ಪಂಚಾಯಿತಿ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಈವರೆಗೆ ಆಪರೇಷನ್ ಕಮಲ ನಡೆದಿದ್ದು, ಈ ಬಾರಿ ಆಪರೇಷನ್ ಹಸ್ತವೂ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. -ವಿಜಯ್ ಹಾನಗಲ್