ಸೋಮವಾರಪೇಟೆ, ಅ. 26: ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಗೋವಿಂದರಾಜು ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆ ನಡೆಯಿತು.
ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ ಇಂದಿಗೂ ತಮ್ಮ ಕೃಷಿ ಭೂಮಿಗೆ ಸೂಕ್ತ ದಾಖಲಾತಿ ಹೊಂದಿಲ್ಲದ ಕಾರಣ, ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸದಸ್ಯ ಸುಬ್ರಮಣಿ ದೂರಿದರು. ಕೂಡಲೇ ಸ್ಥಳಕ್ಕೆ ದಾಖಲಾತಿ ಮಾಡಿಕೊಡುವ ಕೆಲಸ ಇಲಾಖೆಯಿಂದಾಗಬೇಕು. ಹಾಡಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ, ಮಳೆಯ ನೀರು ಮನೆಯೊಳಗೆ ಬರುತ್ತಿದೆ. ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ. ಸ್ಥಳದಲ್ಲಿಯೇ ಹಾಡಿಯ ನಿವಾಸಿಗಳಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಜಾತಿಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಬೇಕು. ಹಿತರಕ್ಷಣಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೂ ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕೆಂದು ಒತ್ತಾಯಿಸಿದರು.
ಹಾಡಿಗಳ ಕೃಷಿ ಭೂಮಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ಥಾವನೆ ಕಳಿಸಲಾಗಿದೆ. ಮುಂದಿನ 15 ದಿನಗಳ ಒಳಗೆ ದಾಖಲಾತಿ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್ ತಿಳಿಸಿದರು.
ಸಮಿತಿ ಸದಸ್ಯ ಬಿ.ಈ. ಜಯೇಂದ್ರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಕ್ಕಿನಲ್ಲಿರುವ ಭೂಮಿಗೆ ಹದ್ದುಬಸ್ತು ಸರ್ವೆ ಮಾಡಿಸಿಕೊಡುವಂತೆ ಮನವಿ ಮಾಡಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು. ತಾಲೂಕಿನ ಎಲ್ಲ ಹೋಬಳಿಗಳಲ್ಲಿ ನಿವೇಶನ ಹೊಂದಿರುವವರು 94 ಸಿ ಯಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಕೂಡಲೇ ಅವುಗಳ ಹಕ್ಕು ಪತ್ರವನ್ನು ಫಲಾನುಭವಿಗಳಿಗೆ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ತಹಶೀಲ್ದಾರರು ಮಾತನಾಡಿ, ಫಲಾನು ಭವಿಗಳಿಂದ ನಿಗದಿಗೊಳಿಸಿರುವ ಹಣವನ್ನು ಸರ್ಕಾರಕ್ಕೆ ಕಟ್ಟಿಸಿದಲ್ಲಿ ತಕ್ಷಣವೇ ಹಕ್ಕುಪತ್ರ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಬಿಳಿಗೇರಿ ಗ್ರಾಮದಲ್ಲಿ 193/3ರ ಪೈಸಾರಿ ಜಾಗವನ್ನು ಗ್ರಾಮದಲ್ಲಿನ ನಿವೇಶನ ರಹಿತರನ್ನು ಗುರುತಿಸಿ ನೀಡುವಂತೆ ಹೇಳಿದರು.
ಸಭೆಯಲ್ಲಿ ಸಮಿತಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಹಿತರಕ್ಷಣಾ ಸಮಿತಿ ಸದಸ್ಯೆ ಸುಮತಿ ಸೇರಿದಂತೆ ವಿವಿಧ ಇಲಾಖಾ ಧಿಕಾರಿಗಳು ಪಾಲ್ಗೊಂಡಿದ್ದರು.