ವೀರಾಜಪೇಟೆ, ಅ. 26: ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರುಗಳ ಸ್ಥಾನಗಳಿಗೆ ಚುನಾವಣೆ ನಡೆಸಲು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗೆ ಸರಕಾರ ಆದೇಶಿಸಿ ಚುನಾವಣಾ ಪ್ರಕಿಯೆ ಮುಂದುವರೆಸಲು ಸೂಚನೆ ನೀಡಿರುವುದರಿಂದ ಮುಂದಿನ ಹತ್ತುದಿನಗಳೊಳಗೆ ಚುನಾವಣೆ ನಡೆಸಲಾಗುವುದು ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮೀಸಲಾತಿಗೆ ತಂದಿರುವ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿ ರುವುದರಿಂದ ತಾಲೂಕು ಆಡಳಿತ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ.

ಈ ಹಿಂದೆ ಸರಕಾರದ ಆದೇಶದಂತೆ ಚುನಾಯಿತ 18 ಸದಸ್ಯರುಗಳಿಗೆ ತಾ. 27.10.20 ರಂದು ಚುನಾವಣೆ ಎಂದು ಸೂಚನಾ ನೋಟೀಸ್ ನೀಡಲಾಗಿ ದನ್ನು ರದ್ದುಪಡಿಸ ಲಾಗಿತ್ತು. ಎಲ್ಲ ಸದಸ್ಯರು ಗಳಿಗೂ ಮತ್ತೆ ದಿನಾಂಕ ವನ್ನು ನಮೂದಿಸಿ ಚುನಾವಣೆ ಸೂಚನಾ ನೋಟೀಸ್ ನೀಡ ಲಾಗುವುದು ಎಂದು ನಂದೀಶ್ ತಿಳಿಸಿದರು.

ಬಿಜೆಪಿಯ ಎಂಟು ಸ್ಥಾನಗಳ ಪೈಕಿ ಪಟ್ಟಣ ಪಂಚಾಯಿತಿಯ ಹದಿನೇಳನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಹೆಚ್.ಎಂ. ಪೂರ್ಣಿಮಾ ಹಾಗೂ ನಾಲ್ಕನೇ ವಾರ್ಡ್‍ನಿಂದ ಗೆದ್ದಿರುವ ಟಿ.ಆರ್ ಸುಶ್ಮಿತಾ ಇವರುಗಳು ಅಧ್ಯಕ್ಷ ಪದವಿಗೆ ಅರ್ಹತೆಯನ್ನು ಪಡೆದಿದ್ದು ಪಕ್ಷದ ವರಿಷ್ಠರು ಸೂಚಿಸುವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಯಾಗಲಿದ್ದಾರೆ.

ಈಗಾಗಲೇ ಪಕ್ಷದ ವರಿಷ್ಠರು ಈ ಇಬ್ಬರು ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದು ಅಂತಿಮವಾಗಿ ಅಧ್ಯಕ್ಷ ಪದವಿಗೆ ಯಾರನ್ನು ಶಿಫಾರಸು ಮಾಡ ಬೇಕೆಂಬ ನಿರ್ಧಾರಕ್ಕೆ ಬಂದಿಲ್ಲವೆನ್ನಲಾಗಿದೆ.

ಅಧ್ಯಕ್ಷ ಪದವಿಗೆ ಅರ್ಹತೆ ಪಡೆದಿರುವ ಈ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷ ಪದವಿಯ ಆಕಾಂಕ್ಷಿ ಯಾಗಿದ್ದಾರೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಪದವಿ ಎಸ್.ಸಿ.ಗೆ ಮೀಸಲಾಗಿರುವು ದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಅರ್ಹತೆ ಪಡೆದ ಅಭ್ಯರ್ಥಿ ಗಳಿಲ್ಲದಿರುವುದರಿಂದ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷೇತರರು ತಟಸ್ಥ ನೀತಿಯನ್ನು ಅನುಸರಿಸಬೇಕಾಗಿದೆ

ತಾ. 28.10.2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದ್ದರೂ ಕೇವಲ ಆರು ಸ್ಥಾನಗಳನ್ನು ಪಡೆದಿತ್ತು. ಜೆ.ಡಿಎಸ್. 1, ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದಾರೆ.

ಸರಕಾರದ ಮೀಸಲಾತಿ ಪಟ್ಟಿಯಂತೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಾಂಗ್ರೆಸ್ ಪಕ್ಷ ಜನತಾ ದಳ ಹಾಗೂ ಇತರ 3 ಪಕ್ಷೇತರರ ಅಭ್ಯರ್ಥಿಗಳ ಬೆಂಬಲ ಪಡೆದರೆ ಉಪಾಧ್ಯಕ್ಷ ಸ್ಥಾನವನ್ನು ಅವಿರೋಧ ಆಯ್ಕೆಯಿಂದ ಪಡೆಯಬಹುದಾಗಿದೆ.

ಉಪಾಧ್ಯಕ್ಷ ಸ್ಥಾನದ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡರನ್ನು ಸಂಪರ್ಕಿಸಿದಾಗ ಪಕ್ಷದಲ್ಲಿ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಕ್ಷದ ನಿರ್ಧಾರದ ನಂತರ ಜನತಾದಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ಅಭಿಪ್ರಾಯ ಪಡೆಯಲಾಗುವುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕೊನೆ ಗಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ನಿಲುವಿನ ಮೇರೆ ಉಪಾಧ್ಯಕ್ಷ ಪದವಿ ಯಾವ ಪಕ್ಷಕ್ಕೆ ಸೇರಲಿದೆ ಎಂದು ಕಾದು ನೋಡಬೇಕಾಗಿದೆ.

- ಡಿ.ಎಂ.ಆರ್.