*ಗೋಣಿಕೊಪ್ಪಲು, ಅ. 27: ವ್ಯಾಘ್ರನ ದಾಳಿಗೆ ಹಸು ಬಲಿಯಾದ ಘಟನೆ ಸಮೀಪದ ದೇವರಪುರ, ಭದ್ರಗೊಳ ಗ್ರಾಮದಲ್ಲಿ ನಡೆದಿದೆ.

ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಹಸುವಿನ ಕತ್ತಿನ ಭಾಗವನ್ನು ಘಾಸಿಗೊಳಿಸಿದೆ. ತೀವ್ರ ರಕ್ತ ಸ್ರಾವದಿಂದ ಹಸು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಹಸುವಿನ ಮಾಲೀಕ ಜಿ. ಅರ್ಜುನ ಗಣಪತಿ ಮಾಹಿತಿ ನೀಡಿದ್ದಾರೆ. ಹಸುವಿನ ಮೇಲೆ ಹುಲಿ ದಾಳಿ ನಡೆಸುವ ಸಂದರ್ಭ ಸಮೀಪದಲ್ಲೇ ಇದ್ದ ಕಾರ್ಮಿಕ ಚಾಂಡ ಈ ದೃಶ್ಯವನ್ನು ನೋಡಿ ಹೆದರಿ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.