ಸುಂಟಿಕೊಪ್ಪ, ಅ. 27: ಸ್ವಚ್ಛೋತ್ಸವ-ನಿತ್ಯೋತ್ಸವ ಆಚರಣೆ ಅಂಗವಾಗಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಸಿಬ್ಬಂದಿಗಳ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛೋತ್ಸವ-ನಿತ್ಯೋತ್ಸವ ಆಚರಣೆ ಪ್ರಯುಕ್ತ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿಗಳು ಮಾರುಕಟ್ಟೆ ಆವರಣವನ್ನು ಸ್ವಚ್ಛತಾ ಶ್ರಮದಾನ ಕಾರ್ಯವನ್ನು ನಡೆಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಒಣಕಸ ಮತ್ತು ಹಸಿಕಸವನ್ನು ಮನೆಯಿಂದ ಬೇರ್ಪಡಿಸಿ ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಮನೆಗಳಿಗೆ 2 ತರಹದ ಕಸದ ಬುಟ್ಟಿಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್ ಕುಮಾರ್, ಡಿ.ಎಂ. ಮಂಜುನಾಥ್, ಸ್ವಚ್ಛತಾ ಸಿಬ್ಬಂದಿಗಳು ಇದ್ದರು.