ಕರಿಕೆ, ಅ. 27: ಕಾರಿಗೆ ರಸ್ತೆ ಬದಿ ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕಾಗಿ ಸಾರಿಗೆ ಸಂಸ್ಥೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಈ ಸಂಬಂಧ ಉಭಯ ಕಡೆಗಳಿಂದಲೂ ಪರಸ್ಪರ ದೂರು ದಾಖಲಾಗಿದೆ.

ಮಡಿಕೇರಿಯಿಂದ ಕರಿಕೆಗೆ ತೆರಳುವ ಸಾರಿಗೆ ಸಂಸ್ಥೆ ಬಸ್ ಎಳ್ಳುಕೊಚ್ಚಿ ಬಳಿ ತೆರಳುತ್ತಿದ್ದಂತೆ ಎದುರಿನಿಂದ ಬಂದ ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ಯುವಕರು ಬಸ್ ಕಂಡಕ್ಟರ್ ರಾಜಶೇಖರ್ ಎಂಬವರೊಂದಿಗೆ ಜಗಳವಾಡಿ ಹಲ್ಲೆ ನಡೆಸಿದ್ದಲ್ಲದೆ, ಕರಿಕೆಯಲ್ಲಿ ರಾತ್ರಿ ತಂಗಿದ್ದ ವೇಳೆ ಮತ್ತೆ ಗುಂಪುಕಟ್ಟಿಕೊಂಡು ಬಂದು ಹಲ್ಲೆ ನಡೆಸಿ, ಜೇಬಲ್ಲಿದ್ದ ಹಣವನ್ನು ಕಸಿದುಕೊಂಡಿರುವುದಾಗಿ ರಾಜಶೇಖರ್ ದೂರು ನೀಡಿದ್ದಾರೆ. ಬಳಿಕ ಮಡಿಕೇರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ.

ಇತ್ತ ಹಲ್ಲೆ ನಡೆಸಿದವರೆನ್ನಲಾದ ಯುವಕರ ಪರವಾಗಿ ಓರ್ವನ ಸಹೋದರ ಠಾಣೆಗೆ ಆಗಮಿಸಿ ತನ್ನ ಸಹೋದರನ ಮೇಲೆ ಕಂಡಕ್ಟರ್ ಹಾಗೂ ಡ್ರೈವರ್ ಹಲ್ಲೆ ನಡೆಸಿರುವುದಾಗಿ ಪ್ರತಿದೂರು ನೀಡಿದ್ದಾರೆ.

ಉಭಯ ಕಡೆಗಳ ದೂರನ್ನು ಪರಿಗಣಿಸಿ ಮೊಕದ್ದಮೆ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಮಹದೇವ ಮುಂದಿನ ಕ್ರಮಕೈಗೊಂಡಿದ್ದಾರೆ.