ಮಡಿಕೇರಿ, ಅ. 23: ಇಡೀ ರಾಜ್ಯದಲ್ಲಿ ಉತ್ತಮವಾಗಿ ನಿರ್ವಹಣೆಗೊಳ್ಳುತ್ತಿರುವ ಕೊಡಗಿನ ಸಹಕಾರ ಸಂಸ್ಥೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವುದರೊಂದಿಗೆ, ಕೊಡಗಿನಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡುವ ದವಸ ಭಂಡಾಗಳನ್ನು ಪುನರುತ್ಥಾನಗೊಳಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೊಡಗು ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ನುಡಿದರು.ನೂತನ ಅಧ್ಯಕ್ಷರಾಗಿ ದ್ವಿತೀಯ ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡಿರುವ ಅವರು, ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, 1960ರ ದಶಕದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಸ್ತಿತ್ವದೊಂದಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕಟ್ಟಡದಲ್ಲಿ ಕಾರ್ಯಾರಂಭಿಸಿದ್ದು, ಪ್ರಸಕ್ತ ಸ್ವಂತ ಕಟ್ಟಡದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದೆ ಎಂದು ನೆನಪಿಸಿದರು.

282 ಸಂಸ್ಥೆ ಸಕ್ರಿಯ : ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ, ಕೊಡಗು ಏಲಕ್ಕಿ ಬೆಳೆಗಾರರ ಸಹಕಾರ ಸಂಘ, ಕೊಡಗು ಜೇನು ಕೃಷಿಕರ ಪ್ರಗತಿ ಸಂಘ ಸೇರಿದಂತೆ ಸುಮಾರು 320 ಸಹಕಾರ ಸಂಸ್ಥೆಗಳಿದ್ದು, ಈ ಪೈಕಿ 282 ಸಂಸ್ಥೆಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದೆ ಎಂದ ಮನುಮುತ್ತಪ್ಪ, ಒಕ್ಕೂಟದಿಂದ ಇನ್ನಷ್ಟು ಬಲವರ್ಧನೆಗೆ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು.ಸುಧಾರಣಾ ಕ್ರಮ : ಜಿಲ್ಲಾ ಕೇಂದ್ರ ಮಟ್ಟದಿಂದ ಗ್ರಾಮ ಮಟ್ಟದ ದವಸ ಭಂಡಾರ ಹಾಗೂ ಕೃಷಿ ಪತ್ತಿನ ಸಂಘಗಳ ತನಕ, ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಆಗಿಂದಾಗ್ಗೆ ಸಹಕಾರ ಒಕ್ಕೂಟದಿಂದ ತರಬೇತಿ

(ಮೊದಲ ಪುಟದಿಂದ) ಕಾರ್ಯಾಗಾರ ಆಯೋಜಿಸುತ್ತಿರುವುದಾಗಿ ನೆನಪಿಸಿದರು. ಇಲ್ಲಿ ಆಡಳಿತ ಅಧಿಕಾರಿಗಳು, ಸಿಬ್ಬಂದಿ, ನಿರ್ದೇಶಕರು ಸೇರಿದಂತೆ ವಿವಿಧ ಹಂತದ ತರಬೇತಿಯನ್ನು ತಜ್ಞರಿಂದ ಕಲ್ಪಿಸುತ್ತಿರುವುದಾಗಿ ವಿವರಿಸಿದರು.

ಶೈಕ್ಷಣಿಕ ನಿಧಿ : ಸಹಕಾರ ಸಂಸ್ಥೆಗಳಿಂದ ವಾರ್ಷಿಕ ಆದಾಯದಲ್ಲಿ ಶೇಕಡ 2ರಷ್ಟು ಶಿಕ್ಷಣ ನಿಧಿ ಕ್ರೋಢೀಕರಿಸಿ ಆ ಮುಖಾಂತರ ತರಬೇತಿ ನೀಡುತ್ತಿದ್ದೇವೆ ಎಂದ ಅವರು, ವಾರ್ಷಿಕವಾಗಿ ಏಳು ದಿನ ಸಹಕಾರಿ ಸಪ್ತಾಹ ಆಯೋಜಿಸಿ, ಸಂಸ್ಥೆಗಳ ಬಲವರ್ಧನೆಗೆ ಒತ್ತು ನೀಡಲಾಗುತ್ತಿದೆ ಎಂಬುದಾಗಿ ಉಲ್ಲೇಖಿಸಿದರು.

ಗುರುತಿಸುವ ಕೆಲಸ : ತಾವು ಸಂಸ್ಥೆಯ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯ ಹಿರಿಯ ಸಹಕಾರಿಗಳನ್ನು ಗುರುತಿಸಿ ‘ಸಹಕಾರ ರತ್ನ’ ಪುರಸ್ಕಾರದೊಂದಿಗೆ, ಅಂಥವರನ್ನು ಗೌರವಿಸಲಾಗುತ್ತಿದೆ.

ತಾಲೂಕು, ಹೋಬಳಿ ಹಂತದಲ್ಲೂ ಇಂಥ ಪ್ರಯತ್ನ ಮುಂದುವರೆದಿದ್ದು, ಸಹಕಾರ ಚಟುವಟಿಕೆಗಳನ್ನು ಎಲ್ಲರಿಗೂ ತಲುಪಿಸುವ ಸಲುವಾಗಿ ತ್ರೈಮಾಸಿಕ ಪತ್ರಿಕೆ ‘ಕೊಡಗು ಸಹಕಾರ’ ಹೊರತರಲಾಗುತ್ತಿದೆ ಎಂದರು.

ತಾವು ದ್ವಿತೀಯ ಅವಧಿಗೆ ಅಧ್ಯಕ್ಷರಾಗಿದ್ದು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಇತರ ಸಂಸ್ಥೆಗಳ ಸಹಯೋಗದಿಂದ ಭವಿಷ್ಯದಲ್ಲಿ ಇನ್ನಷ್ಟು ಚಟುವಟಿಕೆ ರೂಪಿಸಿ, ಕೊಡಗಿನ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸುವುದಾಗಿ ಮನುಮುತ್ತಪ್ಪ ಆಶಯ ನುಡಿಯಾಡಿದರು.