ಮಡಿಕೇರಿ, ಅ. 24: ಆಧ್ಯಾತ್ಮಿಕತೆಯ ತಳಹದಿಯಲ್ಲಿ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನ ಬಹುತೇಕ ರಾಷ್ಟ್ರಗಳ ಮಾರ್ಗದರ್ಶಕರಾಗಿದ್ದು, ಸ್ವತಃ ಅಮೇರಿಕಾ ರಾಷ್ಟ್ರಾಧ್ಯಕ್ಷ ಟ್ರಂಪ್‍ರಂತ ಜಾಗತಿಕ ನಾಯಕರು ನಮ್ಮ ದೇಶದ ಪ್ರಧಾನಿಯ ನಡೆಯನ್ನು ಅನುಸರಿಸುತ್ತಿದ್ದಾರೆ. ಇದು ಜಗದ್ವಂದ್ಯ ಭಾರತದ ಪರಿಕಲ್ಪನೆ ಸಾಕಾರಗೊಂಡಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಬಣ್ಣಿಸಿದರು.ನಗರದ ಕ್ರಿಸ್ಟಲ್‍ಕೋರ್ಟ್ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಪಾಕ್ ಮತ್ತು ಚೀನಾದ ಕುತಂತ್ರಗಳನ್ನು ಹಿಮ್ಮೆಟ್ಟಿಸಿ ಭಾರತೀಯ ಸೈನಿಕರ ಮನೋಸ್ಥೈರ್ಯ ಕುಗ್ಗದಂತೆ ಶತ್ರುಗಳಿಗೆ ತಿರುಗೇಟು ನೀಡುವಲ್ಲಿ ಪ್ರಧಾನಿ ಮೋದಿ ತೋರಿದ ದಿಟ್ಟತನ ಶ್ಲಾಘನೀಯ ಎಂದು ಪ್ರಶಂಸಿಸಿದರು. ದೇಶದ ಪ್ರಧಾನಿಯಾದ ಬೆನ್ನಲ್ಲೇ ಮೋದಿ ಅವರು ಪಾಕ್ - ಚೀನಾ ಹೊರತು ಜಗತ್ತಿನ ಇತರ ರಾಷ್ಟ್ರನಾಯಕರ ಬೆಂಬಲದೊಂದಿಗೆ; ಭಾರತವನ್ನು ಜಗತ್ತು ಗೌರವದಿಂದ ಕಾಣುವಂತೆ ಮಾರ್ಗದರ್ಶಕ ರಾಗಿದ್ದಾರೆ ಎಂದು ನುಡಿದ ಅವರು, ಭ್ರಷ್ಟಾಚಾರಮುಕ್ತ ಆಡಳಿತ ಹಾಗೂ ‘‘ಸಬ್‍ಕಾ ಸಾಥ್ - ಸಬ್‍ಕಾ ವಿಕಾಸ್’’ ಧ್ಯೇಯದೊಂದಿಗೆ ಪ್ರತಿಯೊಬ್ಬರ ಏಳಿಗೆಗೆ ಕೇಂದ್ರ ಸರಕಾರದ ಕೊಡುಗೆ ಸಿಗುವಂತಾಗಿದೆ ಎಂದರು.

ಪ್ರಥಮ ಸಾಧನೆ

ಆ ದಿಸೆಯಲ್ಲಿ ಜನಧನ್ ಯೋಜನೆ, ಫಸಲ್ ಭೀಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯ ಆರೋಗ್ಯ ನಿಧಿ, ಬಡವರು, ರೈತ - ಕಾರ್ಮಿಕರ ಸಹಿತ ಮಹಿಳೆಯರ ಖಾತೆಗಳಿಗೆ ನೇರ ಹಣ ಹೂಡಿಕೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಪ್ರಥಮವೆಂದು ಸಮರ್ಥನೆ ನೀಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಪರಿಣಾಮಕಾರಿಯಾಗಿ ಕೊರೊನಾ ಪಿಡುಗು ಹಾಗೂ ಪ್ರಾಕೃತಿಕ ವಿಕೋಪದ ಸನ್ನಿವೇಶ ನಿಭಾಯಿಸುವಲ್ಲಿ ಸಫಲವಾಗಿವೆ ಎಂದು ಅಂಕಿ ಅಂಶ ನೀಡಿದರು.

ಇಂದು ಗೌರವ - ಅಂದು ಅಪಹಾಸ್ಯ:- ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಮಾರ್ಗದರ್ಶನ ನೀಡುತ್ತಿದ್ದು, ಬಿಜೆಪಿ ಜಗತ್ತಿನ ಬಲಿಷ್ಠ ರಾಜಕೀಯ ಶಕ್ತಿಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಬಣ್ಣಿಸಿದರು. ಸಂವಿಧಾನದಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದು ಸೇರಿದಂತೆ, ಕೊರೊನಾ ತಡೆಗಾಗಿ ಮುಂಜಾಗ್ರತಾ ಕ್ರಮಗಳು, ಗಡಿ ರಕ್ಷಣೆಯಲ್ಲಿ ದಿಟ್ಟಕ್ರಮ ಪ್ರಧಾನಿ ಮೋದಿ ಸರಕಾರದ ಸಾಧನೆ ಎಂದು ಕೊಂಡಾಡಿದರು. ಒಂದೊಮ್ಮೆ ಭಾರತದಲ್ಲಿ ಪ್ರಕೃತಿ, ಗಿಡ, ಮರ, ಕಲ್ಲು, ಜಲ, ನೆಲ ಆರಾಧನೆಯಯನ್ನು ಅಪಹಾಸ್ಯ ಮಾಡುತ್ತಿದ್ದ ಜಗತ್ತು ಇಂದು ನಮ್ಮ

(ಮೊದಲ ಪುಟದಿಂದ) ಜೀವನ ಕ್ರಮವನ್ನು ಅನುಸರಿಸುವಂತಾಗಿದೆ ಎಂದು ನೆನಪಿಸಿದರು. 2018ರ ಕೊಡಗಿನ ದುರಂತ ವೇಳೆ, ರಾಜ್ಯದ ಮುಖ್ಯಮಂತ್ರಿಗಳು 536 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಈಗಾಗಲೇ 100 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಉಲ್ಲೇಖಿಸಿದರು.

ಕಸ್ತೂರಿ ರಂಗನ್ ವರದಿ ಉಲ್ಲೇಖ :- ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ತಮ್ಮ ಭಾಷಣದಲ್ಲಿ ಕಸ್ತೂರಿರಂಗನ್ ವರದಿಯನ್ನು ಉಲ್ಲೇಖಿಸಿದರು. ಈ ವರದಿ ಜಾರಿಗೊಳ್ಳದಂತೆ ಬಿಜೆಪಿ ಸರಕಾರಗಳು ಜವಾಬ್ದಾರಿ ವಹಿಸುವ ಆಶಯ ವ್ಯಕ್ತಪಡಿಸಿದ ಅವರು, ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳ ಬಹಳಷ್ಟು ಜನತೆಯ ಬದುಕಿಗೆ ಕಸ್ತೂರಿ ರಂಗನ್ ವರದಿ ಮಾರಕವಾಗಲಿದೆ ಎಂದು ಕಳವಳ ಹೊರಗೆಡವಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪ್ರಾಸ್ತಾವಿಕ ನುಡಿಯೊಂದಿಗೆ; ಕೊಡಗಿನಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವುದ ರೊಂದಿಗೆ ವಿವಿಧ ರೀತಿಯ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಪಟ್ಟಿಯನ್ನು ತೆರೆದಿಟ್ಟರು.

ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ, ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್, ಗೋಪಾಲಕೃಷ್ಣ ದೇರಳೆ, ಬಿ.ಬಿ. ಭಾರತೀಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಹೇಶ್ ಅಮೀನ್ ಪ್ರಾರ್ಥನೆಯೊಂದಿಗೆ ಪಕ್ಷದ ಪ್ರಮುಖ ಅರುಣ್ ಭೀಮಯ್ಯ ನಿರೂಪಿಸಿದರು. ವಿ.ಕೆ. ಲೋಕೇಶ್ ಅಗಲಿದ ನಾಯಕರ ಸ್ಮರಿಸಿದರು. ಹುಲ್ಲೂರಿಕೊಪ್ಪ ಮಾದಪ್ಪ ಸ್ವಾಗತಿಸಿ, ವಕ್ತಾರ ಮಹೇಶ್ ಜೈನಿ ವಂದಿಸಿದರು. ಜಿಲ್ಲಾ ಬಿಜೆಪಿ ಮಾಜೀ ಅಧ್ಯಕ್ಷರು, ಹಿರಿಯ ಮುಖಂಡರು, ಜಿಲ್ಲೆ ಹಾಗೂ ತಾಲೂಕು ಪ್ರಮುಖರು, ಮಂಡಲ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.