ಸೋಮವಾರಪೇಟೆ, ಅ. 24: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೋಟೆಬೆಟ್ಟಕ್ಕೆ ತೆರಳಿದ ಸಂದರ್ಭ ಸ್ಥಳೀಯರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ, ಸುಂಟಿಕೊಪ್ಪದ ಯುವಕನೋರ್ವ ಹಾಕಿದ್ದ ವಾಟ್ಸಾಪ್ ಸಂದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಪವಿತ್ರ ಕ್ಷೇತ್ರದಲ್ಲಿ ಮೋಜು ಮಸ್ತಿಗೆ ಯಾವದೇ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ನಾವುಗಳು ಕೋಟೆ ಬೆಟ್ಟದಲ್ಲಿರುವ ಶ್ರೀ ಬೊಟ್ಲಪ್ಪ ಈಶ್ವರ ದೇವಾಲಯವನ್ನು ಪಾವಿತ್ರ್ಯತೆಯ ಕ್ಷೇತ್ರವೆಂದು ಪರಿಗಣಿಸಿ, ಭಕ್ತಿಭಾವದಿಂದ ನಡೆದುಕೊಳ್ಳುತ್ತಿದ್ದು, ಕೆಲ ಪ್ರವಾಸಿಗರು ಮೋಜು ಮಸ್ತಿಗಾಗಿ ಇಲ್ಲಿಗೆ ಆಗಮಿಸಬಾರದು ಎಂದು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.
ಕೋಟೆ ಬೆಟ್ಟವನ್ನು ಪ್ರವಾಸಿತಾಣ ವೆಂದು ಯಾರೂ ಪರಿಗಣಿಸಿಲ್ಲ. ಈ ವ್ಯಾಪ್ತಿಯಲ್ಲಿ ಸಂರಕ್ಷಿತ ಅರಣ್ಯಪ್ರದೇಶ, ಬೊಟ್ಲಪ್ಪ ದೇವಾಲಯದ ಆಸ್ತಿ ಹಾಗೂ ಸ್ಥಳೀಯರ ಆಸ್ತಿಗಳಿದ್ದು, ಪ್ರವಾಸಿ ತಾಣಕ್ಕೆಂದು ಯಾವ ಜಾಗವನ್ನೂ ನಿಗದಿ ಮಾಡಿಲ್ಲ. ಆದರೂ ಪ್ರವಾಸಿಗರು ನಮ್ಮ ಜಾಗದೊಳಗೆ ಪ್ರವೇಶಿಸಿ ಮೋಜುಮಸ್ತಿ ಮಾಡುತ್ತಾರೆ. ಬಿಯರ್ ಬಾಟಲ್‍ಗಳನ್ನು ಒಡೆಯುತ್ತಿರುವದರಿಂದ ನಮಗಳಿಗೆ ಓಡಾಡಲೂ ಸಮಸ್ಯೆಯಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಪವಿತ್ರ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಭಕ್ತಿ ಭಾವದಿಂದ ಬರುವವರಿಗೆ ಯಾವದೇ ಅಭ್ಯಂತರವಿಲ್ಲ. ಆದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ, ಮಾಂಸ, ಗಾಂಜ, ಸಿಗರೇಟ್ ಸೇದುವದು, ಅನೈತಿಕ ಚಟುವಟಿಕೆ ನಡೆಯದಂತೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಗರ್ವಾಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಷ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪೊನ್ನಪ್ಪ, ಪ್ರಮುಖರಾದ ಅಪ್ಪಾಜಿ, ಸುದೀಪ್ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಿಳಿಯಾದ ಗೊಂದಲ: ಕಳೆದ ತಾ. 18ರಂದು ಕೋಟೆಬೆಟ್ಟಕ್ಕೆ ತೆರಳಿದ್ದ ಸುಂಟಿಕೊಪ್ಪದ ನಾಸಿರ್ ಸೇರಿದಂತೆ ಇತರರ ಮೇಲೆ ಕೆಲವರು ಸಂಜೆ 7 ಗಂಟೆಯ ಸುಮಾರಿಗೆ ಹಲ್ಲೆ ನಡೆಸಿದ ಬಗ್ಗೆ ನಾಸಿರ್ ಎಂಬಾತ ವಾಟ್ಸಾಪ್‍ನಲ್ಲಿ ಸಂದೇಶವೊಂದನ್ನು ಹರಿಬಿಟ್ಟಿದ್ದು, ಇದರಲ್ಲಿ ಸ್ಥಳೀಯ ಗ್ರಾಮಸ್ಥರು ನಮ್ಮ ಬೈಕ್‍ಗಳನ್ನು ಪಂಕ್ಚರ್ ಮಾಡಿ, ಬೆದರಿಸಿ, ಹಲ್ಲೆ ನಡೆಸಿ, ಹಣ ದೋಚಿದ್ದಾರೆ ಎಂದು ಆರೋಪಿಸಿದ್ದರು.
ಇದರೊಂದಿಗೆ ಇದಕ್ಕೆ ಪ್ರತೀಕಾರ ನಾವು ತೆಗೆದುಕೊಳ್ಳುತ್ತೇವೆ. ಆದರೆ ಬೇರೆಯವರು ಕೋಟೆಬೆಟ್ಟಕ್ಕೆ ತೆರಳುವಾಗ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ, ಫ್ಯಾಮಿಲಿ ಹೋಗುವಾಗ ಎಚ್ಚರವಿರಲಿ, ಹೆಣ್ಣು ಮಕ್ಕಳಿದ್ದರೆ ಹೆಚ್ಚಿನ ಜಾಗ್ರತೆವಹಿಸಿ. ಇಂತಹ ಕೆಲ ಸ್ಥಳೀಯರು ಏನು ಬೇಕಾದರೂ ಮಾಡಬಹುದು ಎಂದು ವಾಯ್ಸ್ ಮೆಸೇಜ್‍ನಲ್ಲಿ ಹೇಳಿದ್ದರು.
ಇದಾಗಿ 5 ದಿನಗಳ ನಂತರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನೂ ನೀಡಿದ್ದರು. ಇಂದು ಗ್ರಾಮಸ್ಥರು ಹಾಗೂ ದೂರುದಾರರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದರು. ಈ ಸಂದರ್ಭ 30ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಠಾಣೆಯ ಬಳಿ ಜಮಾಯಿಸಿ, ವಾಟ್ಸಾಪ್ ಸಂದೇಶದಲ್ಲಿ ಗ್ರಾಮಸ್ಥರ ಬಗ್ಗೆ ಅವಹೇಳನ ಹಾಗೂ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿರುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ್ದರೆ ಅಂದೇ ಪೊಲೀಸ್ ದೂರು ನೀಡಬೇಕಿತ್ತು. ಅದನ್ನು ಬಿಟ್ಟು ಗ್ರಾಮಸ್ಥರ ಬಗ್ಗೆ ಸಮಾಜದಲ್ಲಿ ತಪ್ಪು ಭಾವನೆ ಮೂಡುವಂತೆ ಸಂದೇಶ ಹರಿಬಿಟ್ಟಿದ್ದು ಸರಿಯಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮತ್ತೊಂದು ಸಂದೇಶ ರಚಿಸಿ, ಗ್ರಾಮಸ್ಥರ ಬಗ್ಗೆ ಮಾಡಿರುವ ಆರೋಪಕ್ಕೆ ಕ್ಷಮೆ ಕೇಳಿದ ನಂತರ ಪರಿಸ್ಥಿತಿ ತಿಳಿಯಾಯಿತು. ನಂತರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ವಿನಯ್‍ಕುಮಾರ್ ಅವರುಗಳ ಸಮಕ್ಷಮ ಉಭಯ ತಂಡಗಳನ್ನು ಕರೆಸಿ ತಾ. 18ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥ ಗೊಳಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಹಿಂದೂ ಜಾಗರಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ.ಬಿ. ಉಮೇಶ್, ಪ್ರಧಾನ ಕಾರ್ಯದರ್ಶಿ ಸುನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.