ಕೂಡಿಗೆ, ಅ. 23: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡುಮಂಗಳೂರು, ಹೆಬ್ಬಾಲೆ, ಮುಳ್ಳುಸೋಗೆ, ತೊರೆನೂರು, ಶಿರಂಗಾಲ, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಕ್ರಿಯಾ ಯೋಜನೆ ಅಭಿಯಾನ ನಡೆಯುತ್ತಿದೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಗ್ರಾಮದ ರೈತರ ಜಮೀನಿನ ಕಾಮಗಾರಿಗಳ ಬೇಡಿಕೆಯ ಅನುಗುಣವಾಗಿ ಮತ್ತು ರೈತರಿಗೆ ಅನುಕೂಲವಾಗುವಂತೆ ಮಾಡಲು ಸರಕಾರದ ನಿಯಮಾನುಸಾರವಾಗಿ ಅವರ ಜಮೀನಿನ ಕಾಮಗಾರಿಯನ್ನು ಅವರೆ ನಿರ್ವಹಿಸಿಕೊಳ್ಳಲು ಅವಕಾಶವಿದ್ದು ಅದರಂತೆ ಆಯಾ ವ್ಯಾಪ್ತಿಯ ರೈತರು ಉದ್ಯೋಗ ಖಾತರಿ ನೋಂದಣಿ ಮೂಲಕ ಅವರ ಜಮೀನಿನ ಪ್ರಮುಖವಾದ ಕೆಲಸವನ್ನು ಮಾಡಲು ಅನುಕೂಲ ಕಲ್ಪಿಸಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಅವರು ಗ್ರಾಮ ಪಂಚಾಯಿತಿಯ ಹತ್ತು ಉಪ ಗ್ರಾಮಗಳ ರೈತರಿಗೆ ತಿಳುವಳಿಕೆ ನೀಡಿದರು.

ಕ್ರಿಯಾ ಯೋಜನೆ ಅನುಗುಣವಾಗಿ ರೈತರ ಜಮೀನಿನ ಬೇಡಿಕೆಯ ಪ್ರಮಾಣದ ಪ್ರಕಾರ ಕಾಮಗಾರಿಗಳಿಗೆ ಚಾಲನೆ ಮತ್ತು ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಗ್ರಾಮದ ರೈತರ ಅಭಿವೃದ್ಧಿಗೆ ಸಹಕಾರವಾಗುವುದರಿಂದ ವೈಜ್ಞಾನಿಕವಾಗಿ ಬೇಸಾಯ ಮಾಡಲು ಉಪಯುಕ್ತವಾಗುತ್ತದೆ ಎಂದರು.