ಸೋಮವಾರಪೇಟೆ,ಅ.23: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೋಟೆಬೆಟ್ಟ ತಾಣದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಸಂಘರ್ಷಗಳು ಮುಂದುವರೆಯುತ್ತಿದ್ದು, ಅಹಿತಕರ ಬೆಳವಣಿಗೆಗೆ ಆಸ್ಪದ ಒದಗಿಸುತ್ತಿದೆ.

ಕೋಟೆಬೆಟ್ಟದಲ್ಲಿರುವ ಶ್ರೀ ಬೊಟ್ಲಪ್ಪ ಈಶ್ವರ ದೇವಾಲಯವನ್ನು ಪಾವಿತ್ರ್ಯತೆಯ ಕ್ಷೇತ್ರವೆಂದು ಸ್ಥಳೀಯರು ಪರಿಗಣಿಸಿದ್ದು, ದೇವಾಲಯ ಸೇರಿದಂತೆ ಸುತ್ತಮುತ್ತಲ ಪ್ರಕೃತಿ ನಿರ್ಮಿತ ಸೌಂದರ್ಯದ ಪ್ರದೇಶವನ್ನು ಪ್ರವಾಸಿ ತಾಣವೆಂದು ಪ್ರವಾಸಿಗರು ತೀರ್ಮಾನಿಸಿರುವದರಿಂದ ಈ ಹಿಂದಿನಿಂದಲೂ ಸಂಘರ್ಷ ಮಾಮೂಲಿಯಂತಾಗಿದೆ.

ಕೋಟೆ ಬೆಟ್ಟದಲ್ಲಿರುವ ಶ್ರೀಬೊಟ್ಲಪ್ಪ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದರೆ, ದೇವಾಲಯದ ಹೊರಭಾಗದಲ್ಲಿ ಪ್ರವಾಸಿಗರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದಕ್ಕೆ ಕಡಿವಾಣ ಹಾಕಲು ಸ್ಥಳೀಯರೇ ತಂಡ ರಚಿಸಿದ್ದಾರೆ.

ಕಳೆದ ತಾ. 18ರಂದು ಕೋಟೆಬೆಟ್ಟಕ್ಕೆ ಪ್ರವಾಸಕ್ಕೆಂದು ತೆರಳಿದ ಯುವಕರ ಗುಂಪಿನ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ರೂಪದಲ್ಲಿ ಕೆಲವರು ದೌರ್ಜನ್ಯ ನಡೆಸಿ, ಹಣ ದರೋಡೆ ಮಾಡಲಾಗಿದೆ ಎಂಬ ಧ್ವನಿಮುದ್ರಿತ ಸಂದೇಶವೊಂದು ವಾಟ್ಸಾಪ್ ಗ್ರೂಪ್‍ಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಗಮನಹರಿಸಿದ ಸಂದರ್ಭ, ಸ್ಥಳೀಯರು-ಪ್ರವಾಸಿಗರ ನಡುವೆ ಆಗಾಗ್ಗೆ ವಾಗ್ವಾದ, ಗಲಾಟೆಗಳು ನಡೆಯುತ್ತಿರುವದು ತಿಳಿದುಬಂದಿದೆ.

ಕೋಟೆಬೆಟ್ಟ ಪ್ರದೇಶ ಹಚ್ಚಹಸಿರಿನ ವನಸಿರಿಯ ನಡುವೆ ಪ್ರಕೃತಿ ನಿರ್ಮಿತ ಸೌಂದರ್ಯದ ತಾಣವಾಗಿದೆ. ಇದರ ತುತ್ತತುದಿಯಲ್ಲಿ ಬೊಟ್ಲಪ್ಪ ಈಶ್ವರ ದೇವಾಲಯವಿದ್ದು, ಸುತ್ತಮುತ್ತಲ ಮೂಲನಿವಾಸಿಗಳಿಗೆ ಪುಣ್ಯಕ್ಷೇತ್ರವಾಗಿದೆ.

ಪಟ್ಟಣದಿಂದ 25 ಕಿ.ಮೀ. ದೂರವಿರುವ, ಜನವಸತಿ ಪ್ರದೇಶದಿಂದ ಹೊರಗುಳಿದಿರುವ ಈ ತಾಣ ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣವೆಂದು ಹೆಸರು ಪಡೆಯುತ್ತಿದೆ. ಇದರಿಂದ ಸಹಜವಾಗಿ ಪ್ರವಾಸಿಗರು ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಇವರಲ್ಲಿ ಹಲವಷ್ಟು ಮಂದಿ ಸಭ್ಯ ಪ್ರವಾಸಿಗರು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ತಮ್ಮ ಪ್ರವಾಸ ಮುಗಿಸಿದರೆ, ಇನ್ನು ಕೆಲವರು ಮೋಜು ಮಸ್ತಿಗೆಂದೇ ಇಲ್ಲಿಗೆ ಆಗಮಿಸುತ್ತಿದ್ದಾರೆ.

ದೇವಾಲಯ ಆವರಣದಲ್ಲಿ ಮದ್ಯಪಾನ ಮಾಡುವದು, ಮಾಂಸದ ಅಡುಗೆ ತಯಾರಿ, ಚಪ್ಪಲಿ ಧರಿಸಿಯೇ ದೇವಾಲಯದ ಒಳಗೆ ಪ್ರವೇಶ ಮಾಡುವದು, ಸುತ್ತಮುತ್ತಲಲ್ಲಿ ಬಿಯರ್ ಬಾಟಲ್ ಒಡೆಯುವದು, ಗಾಂಜಾ-ಸಿಗರೇಟ್ ಸೇದುವದು, ಪ್ಲಾಸ್ಟಿಕ್ ಎಸೆಯುವದು, ಟೆಂಟ್‍ಗಳನ್ನು ನಿರ್ಮಿಸಿ ರಾತ್ರಿ ವೇಳೆಯಲ್ಲಿ ತಂಗುವದು..ಇತ್ಯಾದಿ ಚಟುವಟಿಕೆಗಳು ಹೆಚ್ಚುತ್ತಿದ್ದು, ಇದು ಸ್ಥಳೀಯರೊಂದಿಗಿನ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ.

ಸ್ಥಳೀಯರು ಭಕ್ತಿಭಾವದಿಂದ ಕಾಣುವ ಕ್ಷೇತ್ರದಲ್ಲಿ ಅನೈರ್ಮಲ್ಯದ ವಾತಾವರಣ ಸೃಷ್ಟಿಯಾಗುತ್ತಿರು ವುದರಿಂದ ಸಹಜವಾಗಿ ಸಂಘರ್ಷ ಏರ್ಪಡುತ್ತಿದ್ದು, ಅನೇಕ ಬಾರಿ ಹೊಡೆದಾಟಗಳೂ ನಡೆದಿವೆ ಎಂದು ಗರ್ವಾಲೆ ಗ್ರಾಮ ಪಂಚಾಯಿತಿಯ ಮಾಜೀ ಸದಸ್ಯರೋರ್ವರು ಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ಭಾನುವಾರ 5 ಬೈಕ್‍ಗಳಲ್ಲಿ ತೆರಳಿದ 10 ಮಂದಿ ಯುವಕರು ಸಂಜೆಯ ವೇಳೆಗೆ ಕೋಟೆಬೆಟ್ಟ ಈಶ್ವರ ದೇವಾಲಯದ ಸನಿಹವಿರುವ ಬೆಟ್ಟಕ್ಕೆ ಹತ್ತಿ ಕೆಲಕಾಲ ಸಮಯ ಕಳೆದು ವಾಪಸ್ ಬರುವಷ್ಟರಲ್ಲಿ 5 ಬೈಕ್‍ಗಳನ್ನು ಪಂಕ್ಚರ್ ಮಾಡಿರುವದು ತಿಳಿದುಬಂದಿದೆ.

ಪಂಕ್ಚರ್ ಆಗಿದ್ದ ಬೈಕ್‍ಗಳನ್ನು ತಳ್ಳಿಕೊಂಡು ಬರುವಾಗ ರಸ್ತೆಗೆ ಅಡ್ಡಲಾಗಿ ಬೊಲೆರೋ ವಾಹನವನ್ನು ನಿಲ್ಲಿಸಿ, ಅದರ ನಂಬರ್ ಪ್ಲೇಟ್‍ನ್ನು ಮರೆಮಾಚಿ, ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದ 20ಕ್ಕೂ ಅಧಿಕ ಮಂದಿಯ ತಂಡ, ಬೈಕ್‍ನಲ್ಲಿ ತೆರಳಿದ್ದವರನ್ನು ತಡೆದು, ಹಲ್ಲೆ ಮಾಡಿದ್ದಲ್ಲದೇ ಅವರ ಬಳಿಯಿದ್ದ ಹಣವನ್ನು ದರೋಡೆ ಮಾಡಿದ ಬಗ್ಗೆ ವಾಟ್ಸಾಪ್ ಸಂದೇಶ ರವಾನೆ ಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಮನವಿ ಮಾಡಲಾಗಿದೆ.

ಅರಣ್ಯ ಇಲಾಖಾಧಿಕಾರಿಗಳಂತೆ ವರ್ತಿಸಿ ದರೋಡೆ ಮಾಡಿರುವವರು ಸ್ಥಳೀಯರೇ ಆಗಿದ್ದಾರೆ. ಇದಕ್ಕೆ ಪ್ರತಿಕಾರ ನಾವು ತೆಗೆದುಕೊಳ್ಳುತ್ತೇವೆ. ಆದರೆ ಬೇರೆಯವರು ಕೋಟೆಬೆಟ್ಟಕ್ಕೆ ತೆರಳುವಾಗ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ, ಫ್ಯಾಮಿಲಿ ಹೋಗುವಾಗ ಎಚ್ಚರವಿರಲಿ, ಹೆಣ್ಣು ಮಕ್ಕಳ ಬಗ್ಗೆ ಜಾಗ್ರತೆವಹಿಸಿ ಎಂಬಿತ್ಯಾದಿ ಕಾಳಜಿಯ ಮಾತುಗಳನ್ನು ಈ ಸಂದೇಶದಲ್ಲಿ ಆಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿಯೋರ್ವರು, ಕೋಟೆಬೆಟ್ಟವನ್ನು ಪ್ರವಾಸಿತಾಣವೆಂದು ಯಾರೂ ಪರಿಗಣಿಸಿಲ್ಲ. ಈ ವ್ಯಾಪ್ತಿಯಲ್ಲಿ ಸಂರಕ್ಷಿತ ಅರಣ್ಯಪ್ರದೇಶ, ಬೊಟ್ಲಪ್ಪ ದೇವಾಲಯದ ಆಸ್ತಿ ಹಾಗೂ ಸ್ಥಳೀಯರ ಆಸ್ತಿಗಳಿದ್ದು, ಪ್ರವಾಸಿ ತಾಣಕ್ಕೆಂದು ಯಾವ ಜಾಗವನ್ನೂ ನಿಗದಿ ಮಾಡಿಲ್ಲ. ಆದರೂ ಪ್ರವಾಸಿಗರು ನಮ್ಮ ಜಾಗದೊಳಗೆ ಪ್ರವೇಶಿಸಿ ಮೋಜುಮಸ್ತಿ ಮಾಡುತ್ತಾರೆ. ಬಿಯರ್ ಬಾಟಲ್‍ಗಳನ್ನು ಒಡೆಯುತ್ತಿರುವು ದರಿಂದ ನಮಗಳಿಗೆ ಓಡಾಡಲೂ ಸಮಸ್ಯೆಯಾಗುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ.

ಇದರೊಂದಿಗೆ ಕಳೆದ 5 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಕೊರೊನಾ ಹಿನ್ನೆಲೆ ಕೋಟೆಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವ ಬಗ್ಗೆ ಚರ್ಚಿಸಿ, ಗ್ರಾಮ ಪಂಚಾಯಿತಿಯಿಂದ ಸೂಚನಾ ಫಲಕ ಅಳವಡಿಸಲಾಗಿದೆ. ಆದರೂ ಸಹ ಪ್ರವಾಸಿಗರು ಬರುತ್ತಲೇ ಇದ್ದಾರೆ. ಇದನ್ನು ಪ್ರವಾಸಿ ತಾಣದ ಬದಲಿಗೆ ಪಾವಿತ್ರ್ಯತೆಯ ಕ್ಷೇತ್ರವಾಗಿ ಮಾತ್ರ ಪರಿಗಣಿಸಬೇಕು. ಮೋಜು ಮಸ್ತಿಗೆ ಕಡಿವಾಣ ಹಾಕಬೇಕೆಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕಳೆದ ತಾ. 18ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ಸುಂಟಿಕೊಪ್ಪದ ನಾಸಿರ್, ನಾವುಗಳು ಮೋಜು ಮಸ್ತಿಗೆ ತೆರಳಿರಲಿಲ್ಲ. ಪ್ರವಾಸಿ ತಾಣವಾಗಿರುವ ಕೋಟೆಬೆಟ್ಟಕ್ಕೆ ವಿಹಾರಕ್ಕೆಂದು ಹೋಗಿದ್ದೆವು. ನಮ್ಮ ಬೈಕ್‍ಗಳನ್ನು ಪಂಕ್ಚರ್ ಮಾಡಿ, ಬೆದರಿಸಿ, ಹಲ್ಲೆ ನಡೆಸಿ, ಹಣ ದೋಚಿದ್ದಾರೆ. ಸ್ಥಳದಿಂದ ಓಡಿದರೆ ಬೈಕ್‍ಗೆ ಬೆಂಕಿ ಹಾಕುತ್ತೇವೆ. ಪೊಲೀಸ್ ದೂರು ನೀಡಿದರೆ ಅರಣ್ಯಕ್ಕೆ ಬೆಂಕಿ ಕೊಟ್ಟ ಆರೋಪದ ಮೇರೆ ನಾವುಗಳೇ ದೂರು ನೀಡುತ್ತೇವೆ ಎಂದು ಬೆದರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ದೂರು: ತಾ. 18ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸುಂಟಿಕೊಪ್ಪದ ನಾಸಿರ್, ಯತೀಶ್, ಎಸ್.ಕುಮಾರ್, ಡ್ಯಾನಿಯಲ್, ಚೆಲುವರಾಜು, ಆಯೂಬ್, ಇರ್ಷಾದ್, ತೀರ್ಥಪ್ರಸಾದ್, ಬಷೀರ್, ನಿಸಾರ್ ಅವರುಗಳು ಕೋಟೆಬೆಟ್ಟಕ್ಕೆ ತೆರಳಿದ್ದ ಸಂದರ್ಭ ಹಲವರು ಹಲ್ಲೆ ನಡೆಸಿ, ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.