ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ದಿನಾಚರಣೆ ಮತ್ತು ವಿಶ್ವ ಅಭಿವೃದ್ಧಿ ಮಾಹಿತಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಎರಡು ಜಾಗತಿಕ ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ ರೂಸ್‍ವೆಲ್ಟ್ ಮತ್ತು ಬ್ರಿಟೀಷ್ ಪ್ರಧಾನಿ ಚರ್ಚಿಲ್ ಪ್ರಪಂಚದಲ್ಲಿ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅಮೇರಿಕಾ, ರಷ್ಯಾ, ಬ್ರಿಟನ್ ಮತ್ತು ಚೀನಾ ವಿದೇಶಾಂಗ ಮಂತ್ರಿಗಳು ಮಾಸ್ಕೋದಲ್ಲಿ 1943ರಲ್ಲಿ ಸಭೆ ಸೇರಿದವು.
ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಂಡು ಬರುವ ಸಲುವಾಗಿ ಶಾಂತಿಯನ್ನು ಭಯಸುವ ಸಣ್ಣ ಮತ್ತು ದೊಡ್ಡ ರಾಷ್ಟ್ರಗಳ ಸಾರ್ವಭೌಮ ಸಮಾನತೆಯ ತತ್ವದ ಆಧಾರದ ಮೇಲೆ ಒಂದು ಅಂತರರಾಷ್ಟ್ರೀಯ ಸಂಸ್ಥೆ ಸ್ಥಾಪಿಸುವ ಅವಶ್ಯಕತೆಯನ್ನು ಒತ್ತಿ ಹೇಳಲಾಯಿತು. ಯುದ್ಧ ಮುಗಿದ ನಂತರ 50 ರಾಷ್ಟ್ರಗಳ ಪ್ರತಿನಿಧಿಗಳು, ಸಾನ್‍ಫ್ರಾನ್ಸಿಸ್‍ಕೋವಿನಲ್ಲಿ ಸಮಾವೇಶಗೊಂಡು ವಿಶ್ವಸಂಸ್ಥೆ ಸೇರಿ 1945 ಜೂನ್ 26 ರಂದು ಸಹಿ ಹಾಕಿದರು. ವಿಶ್ವಸಂಸ್ಥೆಯು 1945 ಅಕ್ಟೋಬರ್ 24 ರಂದು ಅಸ್ತಿತ್ವಕ್ಕೆ ಬಂದಿತು. ಸಾಮಾನ್ಯ ಸಭೆ ಭದ್ರತಾ ಸಮಿತಿ ಆರ್ಥಿಕ ಮತ್ತು ಸಾಮಾಜಿಕ ಸಮಿತಿ ಧಮದರ್ಶಿ ಸಮಿತಿ, ಸಚಿವಾಲಯ, ಅಂತರರಾಷ್ಟ್ರೀಯ ನ್ಯಾಯಾಲಯ ಇವು ಆರು ಮುಖ್ಯ ಅಂಗಗಳಾಗಿವೆ. ಇದರ ಉದ್ದೇಶ ಅಂತರರಾಷ್ಟ್ರೀಯ ಶಾಂತಿ ಭದ್ರತೆಯನ್ನು ರಕ್ಷಿಸಿಕೊಂಡು ಬರುವುದು. ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ್‍ನಲ್ಲಿದೆ.
ಇಂದು ಜಗತ್ತು ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿದೆ. ಅಜರ್‍ಬೈಜಾನ್ ಹಾಗೂ ಅರ್ಮೇನಿಯಾ ನಡುವೆ ಯುದ್ಧ ನಡೆಯುತ್ತಿದೆ. ಟರ್ಕಿ ಒಂದು ದೇಶದ ಪರವಿದ್ದರೆ ರಷ್ಯಾ ಅರ್ಮೇನಿಯಾ ಪರವಿದ್ದು, ಇದು ವಿಶ್ವಯುದ್ಧಕ್ಕೂ ದಾರಿಯಾಗಬಹುದು. ಇಂದು ದೇಶ ದೇಶಗಳ ನಡುವೆ ಗಡಿ ಸಮಸ್ಯೆ, ನಿರಾಶ್ರಿತರ ಸಮಸ್ಯೆ ಇನ್ನಿತರ ಹಲವಾರು ಸಮಸ್ಯೆಗಳಿವೆ. ಪರಸ್ಪರ ಅಸಮಾಧಾನ ಸ್ಫೋಟಿಸುವ ಸಂಭವಗಳೇ ಹೆಚ್ಚು. ದೊಡ್ಡ ದೊಡ್ಡ ದೇಶಗಳು ಪರಸ್ಪರ ಸ್ಪರ್ಧೆಯನ್ನು ನಿಲ್ಲಿಸಬೇಕು. ಈ ಸ್ಪರ್ಧೆಗಳು, ಸೇನಾಬಲ, ಅಂತರಿಕ್ಷದ ಸಮರ ವಿರಬಹುದು, ಶಸ್ತ್ರಾಸ್ತ್ರ ಮಾರಾಟ, ಉತ್ಪಾದನೆ, ಬಾಂಬುಗಳ ತಯಾರಿಕೆ ಇವೆಲ್ಲಕ್ಕೂ ಮಿತಿ ಇರಬೇಕು. ಸಣ್ಣ, ಸಣ್ಣ ರಾಷ್ಟ್ರಗಳನ್ನು ದೊಡ್ಡ ರಾಷ್ಟ್ರಗಳು ತುಳಿಯಬಾರದು. ಸೂಪರ್‍ಪವರ್ ಎಂಬ ಸ್ಪರ್ಧೆ ಇರಬಾರದು. ಈ ಎಲ್ಲಾ ದೃಷ್ಟಿಯಲ್ಲಿ ವಿಶ್ವಸಂಸ್ಥೆಯ ಅವಶ್ಯಕತೆ ಇದ್ದು, ವಿಶ್ವಸಂಸ್ಥೆಯು ವಹಿಸುವ ಪಾತ್ರ ಮುಖ್ಯವಾಗಿದೆ.
ಯಾವುದೇ ಎರಡು ದೇಶಗಳ ನಡುವೆ ಇಲ್ಲ ಬಣಗಳ ನಡುವೆ ಅಶಾಂತಿ, ಅಸಮಾಧಾನ ಉಂಟಾದಾಗ, ಯುದ್ಧ ಸಂಭವಿಸುವ ಪ್ರಮೇಯ ಒದಗಿದಾಗ ಉಂಟಾದ ಸಮಸ್ಯೆಗಳ ಪರಿಹಾರಕ್ಕೆ, ಅಸಮಾಧಾನವನ್ನು ಶಮನಗೊಳಿಸುವುದಕ್ಕೆ ವಿಶ್ವಸಂಸ್ಥೆ ಪ್ರಮುಖ ಹೆಜ್ಜೆಗಳನ್ನು ಇಡುತ್ತದೆ. ವಿಶ್ವಸಂಸ್ಥೆ ವಿಶ್ವದ ಎಲ್ಲಾ ರಾಷ್ಟ್ರಗಳ ಪರವಿದ್ದು, ಯಾವುದೇ ಒಂದು ರಾಷ್ಟ್ರದ ಪರ ವಹಿಸುವುದಿಲ್ಲ. ಹಾಗಾಗಲೂಬಾರದು. ವಿಶ್ವದ ಎಲ್ಲಾ ರಾಷ್ಟ್ರಗಳ ಶಾಂತಿ, ಭದ್ರತೆ ವಿಶ್ವಸಂಸ್ಥೆಯ ಗುರಿ. ಈ ನಿಟ್ಟಿನಲ್ಲಿ ಸತತ ಪ್ರಯತ್ನ ವಿಶ್ವ ಸಂಸ್ಥೆಯದ್ದಾಗುವುದು.
ವಿಶ್ವದ ಎಲ್ಲಾ ರಾಷ್ಟ್ರಗಳ ಅಭಿವೃದ್ಧಿ ವಿಶ್ವಸಂಸ್ಥೆಯ ಗುರಿ. ವಿವಿಧ ರೀತಿಯ ಸಚಿವಾಲಯಗಳಿದ್ದು, ಇವು ವಿಶ್ವದ ರಾಷ್ಟ್ರಗಳ ಏಳಿಗೆಗಾಗಿ ದುಡಿಯುತ್ತಿವೆ. ಜಾಗತಿಕ ಯುದ್ಧಗಳು ಸಂಭವಿಸದೇ ಇರುವಲ್ಲೂ ವಿಶ್ವಸಂಸ್ಥೆ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಶಾಂತಿ, ಭದ್ರತೆಯ ಗುರಿ ಸಾಧನೆಯ ವಿಶ್ವ ಸಂಸ್ಥೆ ದಿನಾಚರಣೆ ಅರ್ಥ ಬದ್ಧವಾಗಿದೆ.
- ಹರೀಶ್ ಸರಳಾಯ, ಮಡಿಕೇರಿ