ಮಡಿಕೇರಿ, ಅ. 23: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತೆರಾಲು ಗ್ರಾಮದಲ್ಲಿ ನೆಲೆಸಿರುವ ವ್ಯಕ್ತಿ ಅನಿಲ್‍ಕುಮಾರ್ ಮಲ್ಹೋತ್ರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿಯಲ್ಲಿ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆರಾಲು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾರ್ಮಿಕ ಮಹಿಳೆ ಬಿ.ಸಿ. ಕಾಳಿ ಎಂಬ ವಿಧವಾ ಮಹಿಳೆಯ ಸುಪರ್ದಿಯಲ್ಲಿದ್ದ ಜಾಗ ಹಾಗೂ ಮನೆಯನ್ನು ಬಲಾತ್ಕಾರವಾಗಿ ತೆರವುಗೊಳಿಸಲು ಪ್ರಯತ್ನಿಸಿರುವ ಆರೋಪದಂತೆ ಇವರ ವಿರುದ್ಧ ಮಹಿಳೆ ನೀಡಿದ ದೂರಿನಂತೆ ಎಫ್‍ಐಆರ್ ದಾಖಲಾಗಿದೆ.

ಬಿ.ಸಿ. ಕಾಳಿ ಅವರಿಗೆ ಸೇರಿದ ಸರ್ವೆ ನಂ. 147/2ರ ಅರ್ಧ ಎಕರೆ ಪೈಸಾರಿ ಜಾಗ ಹಾಗೂ ಅಲ್ಲಿ ನಿರ್ಮಿಸಿದ್ದ ಮನೆಯನ್ನು ಈ ಜಾಗ ತನಗೆ ಸೇರಿದ್ದೆಂದು ಹೇಳಿಕೊಂಡು ಅಲ್ಲಿಂದ ತೆರವುಗೊಳಿಸಲು ಇವರು ಪದೇ ಪದೇ ಕಿರುಕುಳ ನೀಡುತ್ತಿದ್ದರು. ಬಳಿಕ ಈ ಜಾಗವನ್ನು ತಮ್ಮಿಂದ ಅವರು ಬಲವಂತವಾಗಿ ಒಪ್ಪಂದ ಮಾಡಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಕಾಳಿ ಪೊಲೀಸ್ ದೂರು ನೀಡಿದ್ದು, ಇದರಂತೆ ಪ್ರಕರಣ ದಾಖಲಾಗಿದೆ.

ಪೊಲೀಸ್ ಅಧೀಕ್ಷಕರಿಗೆ ಪತ್ರ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಏಕೀಕರಣ ರಂಗದ ಮೂಲಕ ರಾಜ್ಯ ಪೊಲೀಸ್ ಎಡಿಜಿಪಿ ಅವರ ಗಮನವನ್ನೂ ಸೆಳೆಯಲಾಗಿದೆ. ಈ ಬಗ್ಗೆ ರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಅವರ ಪತ್ರದಂತೆ ಹಾಗೂ ಪ್ರಕರಣದ ಕುರಿತಾಗಿ ಕೈಗೊಂಡಿರುವ ಕ್ರಮದ ಬಗ್ಗೆ ಅರ್ಜಿದಾರರಿಗೆ ಹಾಗೂ ತಮ್ಮ ಕಚೇರಿಗೆ ಮಾಹಿತಿ ಒದಗಿಸುವಂತೆ ಎಡಿಜಿಪಿ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ.