ಅಲ್-ಬದರ್ ಉಗ್ರರ ಶರಣಾಗತಿ
ಬಾರಾಮುಲಾ, ಅ. 22: ಉತ್ತರ ಕಾಶ್ಮೀರದ ಸೇಬು ಪಟ್ಟಣವಾದ ಸೊಪೋರ್‍ನಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗಿದ್ದಾರೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ, ರಾಷ್ಟ್ರೀಯ ರೈಫಲ್ಸ್, ಜಮ್ಮು-ಕಾಶ್ಮೀರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್‍ಪಿಎಫ್ ಜಂಟಿಯಾಗಿ ಸೊಪೋರ್‍ನ ತುಜ್ಜರ್ ಶರೀಫ್‍ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಮನೆ-ಮನೆಯಲ್ಲಿ ಶೋಧ ನಡೆಸಿದ್ದರು. ಈ ವೇಳೆ, ಅಲ್ ಬದರ್‍ನ ಇಬ್ಬರು ಉಗ್ರರ ಕುಟುಂಬದವರು ಶರಣಾಗುವಂತೆ ಅವರ ಮನವೊಲಿಸಿದ್ದಾರೆ. ಭದ್ರತಾ ಪಡೆಗಳ ಮಾತಿನಂತೆ ಅಡಗಿದ್ದ ಉಗ್ರರು ಇದೀಗ ಶರಣಾಗಿದ್ದಾರೆ. ಕಳೆದ ವಾರ ಬಡ್ಗಾಮ್‍ನಲ್ಲಿ ಓರ್ವ ಉಗ್ರ ಶರಣಾಗಿದ್ದ. ಕಳೆದ ಕೆಲವು ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮುಂದೆ ಆರು ಉಗ್ರರು ಶರಣಾಗಿದ್ದಾರೆ.
ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ
ಬೆಂಗಳೂರು, ಅ. 22: ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಹಾಗೂ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸುವ ಚಿಟ್ ಫಂಡ್ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು-2020ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟದಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ-2020ಕ್ಕೆ ಅನುಮೋದನೆ ನೀಡಲಾಗಿದೆ. ಕಳೆದ ಬಾರಿಯ ಸಂಪುಟದಲ್ಲಿ ಒಂದನೇ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿ, ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಉಡುಪಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮಥ್ರ್ಯಕ್ಕೆ ಮೇಲ್ದರ್ಜೆಗೇರಿಸಿ, ಈ ಆಸ್ಪತ್ರೆ ಕಟ್ಟಡ, ಸಿಬ್ಬಂದಿ ವಸತಿ ಗೃಹಗಳ ಹಾಗೂ ಇತರ ಮೂಲಭೂತ ಸೌಲಭ್ಯ ಕಾಮಗಾರಿಗಳನ್ನು ರೂ. 115 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.
ಶೇ. 30 ರಷ್ಟು ಪಠ್ಯ ವಸ್ತು ಕಡಿತ
ಬೆಂಗಳೂರು, ಅ. 22: ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗದಿರುವ ಹಿನ್ನೆಲೆ ಪದವಿಪೂರ್ವ ಶಿಕ್ಷಣ ಇಲಾಖೆಯು ಯುಟ್ಯೂಬ್‍ನಲ್ಲಿ ಫ್ರಿ ರೆಕಾರ್ಡಿಂಗ್ ವೀಡಿಯೋ ತರಗತಿಗಳನ್ನು ಪ್ರಾರಂಭಿಸಿದೆ. ರಾಜ್ಯ ಸರ್ಕಾರ ಸಹ ಕೇಂದ್ರ ಸರ್ಕಾರದಂತೆ 1 ರಿಂದ 12ನೇ ತರಗತಿವರೆಗೆ ಶೇ. 30 ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿದೆ. ಅದರಂತೆ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಶೇ. 30 ರಷ್ಟು ಪಠ್ಯ ಕಡಿತ ಮಾಡಿದೆ. ಕರ್ನಾಟಕ ಸಂಗೀತ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಯಾವುದೇ ವಿದ್ಯಾರ್ಥಿ ದಾಖಲಾಗದಿರುವ ಹಿನ್ನೆಲೆ ಅದನ್ನು ಈ ಪ್ರಕ್ರಿಯೆಯಿಂದ ಈ ವಿಷಯವನ್ನು ಕೈಬಿಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಂಡಳಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ತಾ. 31 ರಿಂದ ಸಮುದ್ರ ವಿಮಾನ ಸೇವೆ
ನವದೆಹಲಿ, ಅ. 22: ಪ್ರಧಾನಿ ನರೇಂದ್ರ ಮೋದಿ ಅವರು ತಾ. 31 ರಂದು ಗುಜರಾತ್‍ನಲ್ಲಿ ದೇಶದ ಮೊಟ್ಟಮೊದಲ ಸಮುದ್ರ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ವಿಮಾನವು ಅಹಮದಾಬಾದ್‍ನ ಸಬರಮತಿ ರಿವಫ್ರ್ರಂಟ್ನಿಂದ ನರ್ಮದಾ ಜಿಲ್ಲೆಯ ಕೆವಾಡಿಯಾ ಕಾಲೋನಿಯಲ್ಲಿರುವ ಏಕತಾ ಪ್ರತಿಮೆಗೆ ತೆರಳಲಿದ್ದು, ಇದನ್ನು ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ಜೆಟ್ ನಿರ್ವಹಿಸಲಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವಾದ ಅಕ್ಟೋಬರ್ 31 ರಂದು ಸೀಪ್ಲೇನ್ ಸೇವೆ ಆರಂಭಿಸುವುದಾಗಿ ಗುಜರಾತ್ಸರ್ಕಾರ ಈ ಮುಂಚೆ ಘೋಷಿಸಿತ್ತು. ಅಹಮದಾಬಾದ್‍ನ ಸಬರಮತಿ ರಿವಫ್ರ್ರಂಟ್ನಿಂದ ಕೆವಾಡಿಯಾದ ಏಕತಾ ಪ್ರತಿಮೆಯವರೆಗೆ ತಡೆರಹಿತ ಮತ್ತು ಕೈಗೆಟುಕುವ ವಾಯು ಸಂಪರ್ಕವನ್ನು ಒದಗಿಸಲು ಈ ರೀತಿಯ ಸೇವೆ ದೇಶದಲ್ಲಿ ಮೊದಲ ಬಾರಿಗೆ ಆರಂಭವಾಗುತ್ತಿದೆ ಎಂದು ಗುಜರಾತ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿತ್ತು. ಸ್ಪೈಸ್ ಜೆಟ್ 19 ಆಸನಗಳ ವಿಮಾನವನ್ನು ನಿರ್ವಹಿಸಲಿದ್ದು, ಇದರಲ್ಲಿ 14 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಲಿತಕಲಾ ಅಕಾಡೆಮಿ ಪುರಸ್ಕಾರ ಪ್ರದಾನ
ಬೆಂಗಳೂರು, ಅ. 22: ಕರ್ನಾಟಕ ಲಲಿತಕಲಾ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಕಲಾ ಪುರಸ್ಕಾರವನ್ನು ಕೊರೊನಾ ಸೋಂಕು ಹಿನ್ನೆಲೆ ಕನ್ನಡ ಭವನದ ವರ್ಣಾ ಆರ್ಟ್ ಗ್ಯಾಲರಿಯಲ್ಲಿ ಸರಳವಾಗಿ ವಿತರಿಸಲಾಯಿತು. 10 ಜನ ಕಲಾವಿದರಿಗೆ 25,000 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2018ನೇ ಸಾಲಿನಲ್ಲಿ ಪುಸ್ತಕ ಬಹುಮಾನವನ್ನು ನೀಡಲಾಯಿತು. ಬಹುಮಾನ ವಿತರಿಸಿದ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಮಾತನಾಡಿ, ಕೊರೊನಾ ಹಿನ್ನೆಲೆ ಅಕಾಡೆಮಿಯು ಸರಳವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು 365 ಕಲಾಕೃತಿಗಳು ಸ್ಪರ್ಧೆಗೆ ಬಂದಿದ್ದು ಅದರಲ್ಲಿ 10 ಕಲಾಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಕಲಾಗ್ರಾಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹೊಸ ಕಲಾ ಗ್ಯಾಲರಿ ಹಾಗೂ ಸ್ಟುಡಿಯೋ ನಿರ್ಮಾಣವಾಗುತ್ತಿದ್ದು ಇನ್ನೆರಡು ತಿಂಗಳಲ್ಲಿ ಪೂರ್ಣವಾಗಲಿದೆ. ಗ್ಯಾಲರಿಯು ದಕ್ಷಿಣ ಭಾರತದಲ್ಲಿಯೇ ಅಪರೂಪವಾಗಲಿದೆ. ಕಲಾವಿದರಿಗೆ ತುಂಬಾ ಉಪಯೋಗವಾಗಲಿದೆ ಎಂದರು.
ನೂಡಲ್ಸ್ ತಿಂದು 9 ಸಾವು
ಬೀಜಿಂಗ್, ಅ. 22: ಫ್ರೀಜರ್‍ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಭತ್ತು ಮಂದಿ ಧಾರುಣ ಸಾವನ್ನಪ್ಪಿದ್ದು, ತಮಗೆ ಬೇಡ ಎಂದು ಹೇಳಿ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಬೀಜಿಂಗ್‍ನ ಜಿಕ್ಸಿ ನಗರದಲ್ಲಿ ಈ ಘಟನೆ ನಡೆದಿದ್ದು ಕಳೆದ ಒಂದು ವರ್ಷದಿಂದ ಫ್ರೀಜರ್‍ನಲ್ಲಿ ಇಟ್ಟಿದ್ದ ನೂಡಲ್ಸ್ ಸೂಪ್ ಅನ್ನು ಸೇವಿಸಿದ್ದಾರೆ. ಫುಡ್ ಪಾಯ್ಸನ್ ಆಗಿ ಇಬ್ಬರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಖರಿಸಿದ್ದರಿಂದ ಸೂಪ್ ಬಾಂಗ್ ಕ್ರೆಕ್ ಆ್ಯಸಿಡ್ ಪಾಯ್ಸನಿಂಗ್ ಆಗಿದೆ. ಇದನ್ನು ತಿಳಿಯದ ಕುಟುಂಬ ಸೂಪ್ ಸೇವಿಸಿದ್ದಾರೆ. ಹೀಗಾಗಿ ಅವರ ಸಾವಿಗೆ ಕಾರಣವಾಗಿದೆ ಎಂದು ಹೀಲೋಂಗ್ ಜಾಂಗ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್‍ನ ಆಹಾರ ಸುರಕ್ಷತೆ ನಿರ್ದೇಶಕ ಗಾವೋ ಫೀ ತಿಳಿಸಿದ್ದಾರೆ. ಈ ನೂಡಲ್ಸ್ ಕಳಿತ ಜೋಳದ ಹಿಟ್ಟಿನಿಂದ ತಯಾರಿಸಲಾಗಿದೆ. ಇದು ಚೀನಾದ ಸ್ಥಳೀಯ ಅಡುಗೆಯಾಗಿದೆ. ಇದನ್ನು ಸೌನ್ ಟಂಗ್ಜಿ ಅಂತ ಕರೆಯಲಾಗುತ್ತದೆ.
ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ರದ್ದು
ನವದೆಹಲಿ, ಅ. 22: ಕೋವಿಡ್-19 ಭೀತಿಯಿಂದಾಗಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಸಹ ರದ್ದುಗೊಂಡಿದೆ. ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ ಹರಡಿದ ಕಾರಣ ವೈಯಕ್ತಿಕ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಗುರುವಾರ ಈ ಮಾಹಿತಿಯನ್ನು ನೀಡಿತು. ಚಾಂಪಿಯನ್‍ಶಿಪ್ ಅನ್ನು ಮುಂದಿನ ವರ್ಷ ಜನವರಿಯಲ್ಲಿ ನ್ಯೂಜಿಲೆಂಡ್‍ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು ಆದರೆ ಚಾಂಪಿಯನ್ ಶಿಪ್‍ನಲ್ಲಿ ಮುಂದಿನ ಋತುವನ್ನು ಈಗಾಗಲೇ 2021ರಲ್ಲಿ ನಡೆಸಲು ನಿರ್ಧರಿಸ ಲಾಗಿದೆ. ಕೊರೊನಾದ ಆತಂಕದ ಹಿನ್ನೆಲೆ ಚಾಂಪಿಯನ್ ಶಿಪ್ ದಿನಾಂಕವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ, ಬದಲಿಗೆ ರದ್ದತಿಗೆ ಕಾರಣವಾಗುತ್ತದೆ.