ಮಡಿಕೇರಿ, ಅ. 21: ದಾನಗಳಿಗಿಂತಲೂ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ರಕ್ತದಾನ ಮಾಡುವ ಮೂಲಕ ನಾವು ಅತ್ಯಮೂಲ್ಯವಾದ ಜೀವವನ್ನು ರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸಹ ರಕ್ತದಾನ ಮಾಡಬಹುದಾಗಿದೆ.
ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲವಾಗಿದೆ. ಅಲ್ಲದೆ ರಕ್ತವನ್ನು ಕೃತಕವಾಗಿ ಉತ್ಪಾದಿಸಲೂ ಸಹ ಸಾಧ್ಯವಿಲ್ಲ. ರಕ್ತದಾನವನ್ನು ಮನುಷ್ಯನಿಂದ ಮಾತ್ರ ಪಡೆಯಬಹುದಾಗಿದೆ. ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡಿರುವವರನ್ನು ಬದುಕಿಸಲು ಸಾಧ್ಯವಾಗುತ್ತದೆ ಎಂಬ ಅಂಶವನ್ನು ಎಲ್ಲರೂ ಅರಿಯಬೇಕಿದೆ. ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನ: ಉತ್ಪತ್ತಿಯಾಗುತ್ತದೆ. ಒಂದೆರಡು ವಾರಗಳಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ. ಇದಲ್ಲದೆ ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು 20 ನಿಮಿಷಕ್ಕೂ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂಬುದನ್ನು ತಿಳಿಯಬೇಕಿದೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ 18 ರಿಂದ 60 ವರ್ಷದೊಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. ಪುರುಷರು 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ದಾನಿಯ ದೇಹದ ತೂಕ 45 ಕೆ.ಜಿ.ಗಿಂತ ಹೆಚ್ಚಿರಬೇಕು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ.ಗಿಂತಲೂ ಹೆಚ್ಚಿರಬೇಕು. ಸಿಸ್ಟೋಲಿಕ್ ರಕ್ತದೊತ್ತಡವು 100 ರಿಂದ 140 ಇದ್ದು ಡಯೋಸ್ಟೋಲಿಕ್ ಒತ್ತಡವು 70 ರಿಂದ 100 ಇರುವವರು ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ದಾನಿಗಳಿಗೆ ಹಲವಾರು ಪ್ರಯೋಜನಗಳಿವೆ. ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆಯಾಗುತ್ತದೆ. ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ, ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ. ಹೃದಯಾಘಾತವನ್ನು ಶೇ. 80ಕ್ಕಿಂತಲೂ ಜಾಸ್ತಿ ತಡೆಗಟ್ಟಲು ಸಹಾಯವಾಗುತ್ತದೆ. ರಕ್ತದ ಒತ್ತಡ ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹ ಸಹಾಯಕವಾಗಿದೆ. ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ-2020 ರ ಧ್ಯೇಯ ವಾಕ್ಯ “ರಕ್ತವನ್ನು ಸ್ವಯಂ ಪ್ರೇರಣೆಯಿಂದ ದಾನ ಮಾಡೋಣ ಮತ್ತು ಕೊರೊನಾ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡೋಣ” ಎಂಬುದಾಗಿದೆ. ಈ ನಿಟ್ಟಿನಲ್ಲಿ ರಕ್ತದಾನ ಅತೀ ಅಮೂಲ್ಯ. ಮಾಡುವ ರಕ್ತದಾನ ಇನ್ನೊಬ್ಬರಿಗೆ ಜೀವದಾನ ಆಗುವುದರಿಂದ ನಿಯಮಿತವಾಗಿ ರಕ್ತದಾನ ಮಾಡುವುದೇ ಸಮಾಜಕ್ಕೆ ನೀಡುವ ಅತಿ ದೊಡ್ಡ ಸೇವೆಯಾಗಿದೆ. ದೇಶದ ಜಾಗೃತ ಪ್ರಜೆಯಾಗಿ ಸ್ವಯಂ ಪ್ರೇರಿತವಾಗಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕಿದೆ. ಜೊತೆಗೆ ಕುಟುಂಬದವರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿ ರಕ್ತದಾನ ಮಾಡುವಂತೆ ಉತ್ತೇಜಿಸಬೇಕಿದೆ. ಹೆಚ್ಚಿನ ಮಾಹಿತಿ ಮತ್ತು ರಕ್ತದಾನ ಮಾಡುವುದಕ್ಕಾಗಿ ಜಿಲ್ಲಾ ರಕ್ತ ನಿಧಿ ಘಟಕವನ್ನು ಸಂಪರ್ಕಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋರಿದೆ.