ಆಲೂರುಸಿದ್ದಾಪುರ, ಅ. 21: ತನ್ನ ಹೆತ್ತ ಮಗುವನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ತಾಯಿಯ ರೋಧನೆ, ನೋವು-ಸಂಕಟ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಮಾತು ಬಾರದ ಪ್ರತಿಯೊಂದು ಮೂಕ ಪ್ರಾಣಿಗಳಿಗೂ ಈ ನೋವು ಉಂಟಾಗುತ್ತದೆ. ಇಂತಹ ಒಂದು ಮನಕಲುಕುವ ದೃಶ್ಯ ಶನಿವಾರಸಂತೆ ಪಟ್ಟಣದಲ್ಲಿ ಕಂಡುಬಂತು.
ಪಟ್ಟಣದ ಐಬಿ ರಸ್ತೆಯಲ್ಲಿ ಬೆಳಿಗ್ಗೆ ಶ್ವಾನದ ಮರಿಯೊಂದು ವಾಹನ ಅಪಘಾತದಿಂದ ಮೃತಪಟ್ಟಿತ್ತು. ತನ್ನ ಕಣ್ಣೆದುರೆ ಅಪಘಾತದಿಂದ ಸತ್ತ ಶ್ವಾನದ ಮರಿಯನ್ನು ನೋಡಿದ ತಾಯಿ ಶ್ವಾನದ ರೋಧನೆ ಮನಕಲುಕುವಂತಿತ್ತು. ಮರಿಯ ಮೃತ ದೇಹವನ್ನು ಎಳೆದಾಡುತ್ತಾ ಎದ್ದೇಳು-ಎದ್ದೇಳು ಎಂಬಂತೆ ಬೊಗಳುತ್ತಾ ಗೋಳಾಡುತಿತ್ತು. ಈ ಸಂದರ್ಭ ಯಾರೇ ಹತ್ತಿರ ಹೋದರೂ ಕದಲದ ತಾಯಿ ಶ್ವಾನವು ಸತ್ತುಬಿದ್ದಿದ್ದ ಮರಿ ಶ್ವಾನವನ್ನು ಎದ್ದೇಳಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ಜನರ ಕಣ್ಣಲ್ಲಿ ನೀರು ತರಿಸಿತು.
-ದಿನೇಶ್ ಮಾಲಂಬಿ